ಬಂಟ್ವಾಳ, ಎಪ್ರಿಲ್ 29, 2025 (ಕರಾವಳಿ ಟೈಮ್ಸ್) : ಮರ ಸಿಗಿಸುವ ಯಂತ್ರಕ್ಕೆ ಕೈ ಸಿಲುಕಿ ವಿಪರೀತ ರಕ್ತಸ್ರಾವಗೊಂಡ ಪರಿಣಾಮ ಮರದ ಮಿಲ್ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬಿ ಕಸಬಾ ಗ್ರಾಮದ ಅಗ್ರಹಾರ ದರ್ಬೆ ಎಂಬಲ್ಲಿರುವ ಎ ಆರ್ ವುಡ್ ಇಂಡಸ್ಟ್ರಿಯಲ್ಲಿ ಸೋಮವಾರ ಸಂಭವಿಸಿದೆ.
ಮೃತ ಮಿಲ್ ಕಾರ್ಮಿಕನನ್ನು ಮಂಗಳೂರು ತಾಲೂಕು, ಅಳಪೆ ಗ್ರಾಮದ ಪಡೀಲ್-ಸರಸ್ವತಿ ನಗರ ನಿವಾಸಿ ಡೇನಿಯಲ್ ಡಿ ಸೋಜ ಎಂದು ಹೆಸರಿಸಲಾಗಿದೆ. ಹುಟ್ಟಿನಿಂದ ಮೂಗ ಹಾಗೂ ಕಿವುಡರಾಗಿದ್ದ ಇವರು ಕಳೆದ 10 ವರ್ಷಗಳಿಂದ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಅಗ್ರಹಾರ ದರ್ಬೆ ಎಂಬಲ್ಲಿರುವ ಎ ಆರ್ ವುಡ್ ಇಂಡಸ್ಟ್ರಿಯಲ್ಲಿ ಮರದ ಕೆಲಸ ಮಾಡಿಕೊಂಡಿದ್ದರು. ಪ್ರತಿ ದಿನ ಇವರು ಮನೆಯಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದರು.
ಸೋಮವಾರ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದು, ಎಂದಿನಂತೆ ಇವರು ದೇವದಾಸ್, ಪ್ರಾನ್ಸಿಸ್, ರೋೀಷನ್, ಸುರೇಶ್, ಶೈಲೇಶ್ ಹಾಗೂ ಮಿಲ್ ಮಾಲಿಕ ಪೀಟರ್ ವೇಗಸ್ ರವರು ಜೊತೆಯಾಗಿ ಕೆಲಸ ಮಾಡುತ್ತಿರುವಾಗ ಬೆಳಿಗ್ಗೆ ಸುಮಾರು 10:40 ರ ವೇಳೆಗೆ ಡೇನಿಯಲ್ ಡಿಸೋಜಾ ಅವರು ಮರ ಸಿಗಿಸುವ ಯಂತ್ರದಲ್ಲಿ ಮರವನ್ನು ಸಿಗಿಸುವ ಬ್ಲೇಡ್ ಪಕ್ಕದಲ್ಲಿ ಒಂದು ಚಿಕ್ಕ ಮರದ ತುಂಡು ಸಿಲಿಕಿರುವುದು ಕಂಡು ಅದನ್ನು ತನ್ನ ಕೈಯಿಂದ ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ತನ್ನ ಬಲ ಕೈ ಮರ ಸಿಗಿಸುವ ಯಂತ್ರಕ್ಕೆ ಸಿಕ್ಕಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಪಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಸಹೋದರ ರೊನಾಲ್ಡ್ ಡಿ ಸೋಜ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment