ಮಂಗಳೂರು, ಮೇ 02, 2025 (ಕರಾವಳಿ ಟೈಮ್ಸ್) : ರೌಡಿ ಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ಗುರುವಾರ ರಾತ್ರಿ ಬಜ್ಪೆ ಸಮೀಪದ ಕಿನ್ನಿಪದವು ಎಂಬಲ್ಲಿ ದುಷ್ಕರ್ಮಿಗಳ ತಂಡವೊಂದು ಕಡಿದು ಕೊಲೆ ಮಾಡಿದ ತಕ್ಷಣದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆತಂಕದ ಪರಿಸ್ಥಿತಿ ತಲೆದೋರಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬಿಗು ಪೊಲೀಸ್ ಪಹರೆ ಕೈಗೊಂಡ ಹೊರತಾಗಿಯೂ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ವಿವಿಧೆಡೆ ಕಿಡಿಗೇಡಿ ಕೃತ್ಯಗಳು ವರದಿಯಾಗಿವೆ.
ಜಿಲ್ಲೆಯ ಮೂರು ಕಡೆ ಚೂರಿ ಇರಿತ ಪ್ರಕರಣಗಳು ವರದಿಯಾಗಿವೆ. ಮಂಗಳೂರು ಹೊರವಲಯದ ಕಣ್ಣೂರಿನಲ್ಲಿ ಮುಂಜಾನೆ 3 ಗಂಟೆಗೆ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಐವರು ದುಷ್ಕರ್ಮಿಗಳು, ನಗರದ ಮಾರುಕಟ್ಟೆಗೆ ಕೆಲಸಕ್ಕೆ ಹೋಗುತ್ತಿದ್ದ ಇರ್ಶಾದ್ ಎಂಬ ಯುವಕನ ಮೇಲೆ ದಾಳಿ ಮಾಡಿ ಚಾಕು ಇರಿದಿದ್ದಾರೆ. ಈ ವೇಳೆ, ಮನೆಯೊಂದಕ್ಕೆ ಓಡಿ ಹೋಗಿ ಇರ್ಶಾದ್ ಜೀವ ಉಳಿಸಿಕೊಂಡಿದ್ದಾನೆ. ಗಾಯಾಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದೇ ಅಲ್ಲದೆ ಪ್ರತ್ಯೇಕ ಪ್ರಕರಣಗಳಲ್ಲಿ ಕೊಂಚಾಡಿ ಹಾಗೂ ಉಳ್ಳಾಲದಲ್ಲಿ ಇಬ್ಬರಿಗೆ ಚಾಕು ಇರಿಯಲಾಗಿದೆ. ತಡರಾತ್ರಿ ಈ ದಾಳಿ ನಡೆದಿದ್ದು, ಮೂವರು ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಅಲ್ಲದೆ ಶುಕ್ರವಾರ ಹಿಂದೂ ಪರ ಸಂಘಟನೆಗಳ ಮುಖಂಡರು ಜಿಲ್ಲೆ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆ ವಿವಿಧೆಡೆ ಬಸ್ಸುಗಳಿಗೆ ಕಲ್ಲು ತೂರಾಟ ಹಾಗೂ ರಸ್ತೆ ತಡೆ ಪ್ರಕರಣಗಳು ಕೂಡಾ ವರದಿಯಾಗಿವೆ. ಮೃತದೇಹ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಬಿ ಸಿ ರೋಡಿನಲ್ಲಿ ಭಾರೀ ಸಂಖ್ಯೆಯ ಹಿಂದೂಪರ ಕಾರ್ಯಕರ್ತರು ಜಮಾಯಿಸಿದ್ದು, ಈ ಸಂದರ್ಭ ತುಂಬೆ ಕಡೆಯಿಂದ ಪಾಣೆಮಂಗಳೂರು ಕಡೆಗೆ ಮುಸ್ಲಿಮರು ಬರುತ್ತಿದ್ದ ಅಟೋ ರಿಕ್ಷಾ ತಡೆದು ಶಾಸಕರು ಹಾಗೂ ಪೊಲೀಸರ ಸಮ್ಮುಖದಲ್ಲೇ ಹಾನಿಗೊಳಿಸಿದ ಘಟನೆಯೂ ನಡೆದಿದೆ.
0 comments:
Post a Comment