ಬಂಟ್ವಾಳ, ಜೂನ್ 21, 2025 (ಕರಾವಳಿ ಟೈಮ್ಸ್) : ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ಮಹಿಳೆಯು ವ್ಯಕ್ತಿಯೋರ್ವರ ವಿರುದ್ದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಬಗೆಹರಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ವಂಚನೆಗೊಳಗಾಗಿರುವ ಮಡಂತ್ಯಾರು ನಿವಾಸಿ ರಾಜೇಶ್ ಕೆ (43) ಅವರು ಠಾಣೆಗೆ ದೂರು ನೀಡಿದ್ದು, ಇವರಿಗೆ 2024ನೇ ಇಸವಿಯಲ್ಲಿ ಪೇಸ್ ಬುಕ್ ಸಾಮಾಜಿಕ ಜಾಲತಾಣದ ಮೂಲಕ ಆರೋಪಿತೆ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆಯ ಪರಿಚಯವಾಗಿದೆ. ನಂತರದ ದಿನಗಳಲ್ಲಿ ಆಕೆಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿರುವುದಾಗಿದೆ. ಆರೋಪಿತೆಯು ಫೆÇೀನ್ ಮೂಲಕ ಮಾತನಾಡುತ್ತಿದ್ದ ವೇಳೆ ತಾನು ನೊಂದವರಿಗೆ ಹಾಗೂ ವಂಚನೆಗೊಳಪಟ್ಟ ಅನೇಕರಿಗೆ ಸಹಾಯ ಮಾಡಿರುವುದಾಗಿ ತಿಳಿಸಿರುತ್ತಾಳೆ. ಇದನ್ನು ನಂಬಿದ ರಾಜೇಶ್ ಅವರು ತನ್ನ ವಿರುದ್ದ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಆರೋಪಿತೆಗೆ ತಿಳಿಸಿ ಸಹಾಯ ಕೇಳಿರುತ್ತಾರೆ.
ಪ್ರಕರಣವನ್ನು ಬಗೆಹರಿಸಿಕೊಡುವುದಾಗಿ ನಂಬಿಸಿದ ಆರೋಪಿತೆ ಬಳಿಕ ಪ್ರಕರಣ ಬಗೆಹರಿಸಲು ಸ್ವಲ್ಪ ಖರ್ಚು ಇದೆ ಎಂದು ಹೇಳಿ 2025ರ ಫೆಬ್ರವರಿ-ಮೇ ತಿಂಗಳ ಮಧ್ಯದ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 3.20 ಲಕ್ಷ ರೂಪಾಯಿ ಪಡೆದುಕೊಂಡಿರುತ್ತಾಳೆ. ಆದರೆ ರಾಜೇಶ್ ಅವರ ಪ್ರಕರಣ ಬಗೆಹರಿಯದ ಹಿನ್ನೆಲೆಯಲ್ಲಿ ಆಕೆಯನ್ನು ಪ್ರಶ್ನಿಸಿದಾಗ ಆಕೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಸಂಶಯಗೊಂಡ ರಾಜೇಶ್ ಅವರು ಆಕೆಯ ಬಗ್ಗೆ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ರಾಜೇಶ್ ಕೆ ಅವರು ನೀಡಿದ ದೂರಿನ ಮೇರೆಗೆ ಶುಕ್ರವಾರ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.















0 comments:
Post a Comment