ಮಂಗಳೂರು, ಜುಲೈ 03, 2025 (ಕರಾವಳಿ ಟೈಮ್ಸ್) : ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸೆನ್ ಕ್ರೈಂ ಪೊಲೀಸರು ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು-ಬಿಕರ್ನಕಟ್ಟೆ ಸಮೀಪದ ಅಡು ಮರೋಳೀ ನಿವಾಸಿ ರಾಜೇಶ್ ತಾರನಾಥ್ ಅವರ ಪುತ್ರ ತುಷಾರ್ ಅಲಿಯಾಸ್ ಸೋನು (21), ನಾಗುರಿ ನಿವಾಸಿ ಬಾಲಕೃಷ್ಣ ಶೆಟ್ಟಿ ಅವರ ಪುತ್ರ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆ ನಿವಾಸಿ ಶೀತಲ್ ಕುಮಾರ್ ಅವರ ಪುತ್ರ ಸಾಗರ್ ಕರ್ಕೇರಾ (19), ಶಕ್ತಿನಗರ ನಿವಾಸಿ ರಾಜು ಥಾಪ ಅವರ ಪುತ್ರ ವಿಕಾಸ್ ಥಾಪ ಅಲಿಯಾಸ್ ಪುಚ್ಚಿ (23) ಹಾಗೂ ಅಳಕೆ-ಕಂಡೆಟ್ಟು ನಿವಾಸಿ ದಿವಂಗತ ಹರೀಶ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್ (24) ಎಂದು ಹೆಸರಿಸಲಾಗಿದೆ.
ಆರೋಪಿಗಳ ವಿರುದ್ದ ಮಂಗಳೂರು ಸೆನ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ಬುಧವಾರ ಠಾಣಾ ಅಪರಾಧ ಕ್ರಮಾಂಕ: 31/2025 ಕಲಂ 8(ಬಿ) 8(ಸಿ), 20(ಬಿ)(11)(ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ಬುಧವಾರ ಸೆನ್ ಪೆÇಲೀಸ್ ಠಾಣೆಗೆ ಬಂದ ಮಾಹಿತಿ ಮೇರೆಗೆ ಮಂಗಳೂರಿನ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬ ಸ್ಥಳದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿರುವ ವೇಳೆ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. ದಾಳಿ ವೇಳೆ ಬಂಧಿತ ಆರೋಪಿಗಳ ಪೈಕಿ ಪ್ರತಿಯೊಬ್ಬರ ಬಳಿಯೂ 1 ಕೆಜಿಗಿಂತ ಹೆಚ್ಚಿನ ಪ್ರಮಾಣದ ಗಾಂಜಾವನ್ನು ಹಾಗೂ ಗಾಂಜಾ ಪ್ಯಾಕೇಟ್ ಸೇರಿದಂತೆ ಸುಮಾರು 5.20 ಲಕ್ಷ ರೂಪಾಯಿ ಮೌಲ್ಯದ ಒಟ್ಟು 5.759 ಕೆಜಿ ತೂಕದ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 6 ಮೊಬೈಲ್ ಪೊನ್, 1 ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
5 ಜನ ಆರೋಪಿತರು ಮಂಗಳೂರು ನಗರದಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾರೆ. ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೇಟ್ ಗಳಲ್ಲಿ ಪ್ಯಾಕ್ ಮಾಡಿ ಪ್ರತಿ ಗಾಂಜಾ ಪ್ಯಾಕೆಟಿಗೆ 1 ಸಾವಿರ ರೂಪಾಯಿಯಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ತನಿಖೆ ಮುಂದುವರೆದಿದ್ದು, ಈ ಆರೋಪಿಗಳಿಗೆ ಎಲ್ಲಿಂದ ಗಾಂಜಾ ಪೂರೈಕೆಯಾಗುತ್ತಿದೆ ಎಂದು ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಎರಡು ದಿನಗಳ ಹಿಂದೆ ಇಬ್ಬರು ಪೋಷಕರು ಬಂದು ತಮ್ಮ ಮಗ ಗಾಂಜಾ ವ್ಯಸನಿಯಾಗಿದ್ದಾನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ ಹಿನ್ನಲೆಯಲ್ಲಿ ಖಚಿತ ಮಾಹಿತಿ ಪಡೆದುಕೊಂಡು ಸೆನ್ ಕ್ರೈಂ ಪೊಲೀಸರ ತಂಡ ರಚಿಸಿ ತನಿಖೆ ನಡೆಸಿ ಸುಮಾರು 200 ಮಂದಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಒಬ್ಬರೇ ಪೋಷಕರು ಬಂದು ಮಾಹಿತಿ ನೀಡಿದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು 200 ಮಂದಿಗೆ ಗಾಂಜಾ ಪೂರೈಸುತ್ತಿದ್ದ 5 ಮಂದಿಯನ್ನು ಬಂಧಿಸಲು ಸಾಧ್ಯವಾದರೆ, ಇನ್ನುಳಿದಂತೆ 10 ಅಥವಾ 100 ಮಂದಿ ಪೋಷಕರು ಇದೇ ರೀತಿ ಸೂಕ್ತ ಮಾಹಿತಿ ನೀಡಿದಲ್ಲಿ ಅಂತಹ ವ್ಯಕ್ತಿಗಳ ಜಾಡು ಬೇಧಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಮಂಗಳೂರು ನಗರವನ್ನು ಗಾಂಜಾ ನಶೆ ಮುಕ್ತ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪೋಷಕರು, ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment