ಬಂಟ್ವಾಳ, ಜುಲೈ 25, 2025 (ಕರಾವಳಿ ಟೈಮ್ಸ್) : ಅಡಿಕೆ ತೋಟದ ಮಾಲಿಕ ಸುಲಿಯಲು ಕೊಟ್ಟ ಅಡಿಕೆಯನ್ನು ಕೆಲಸದವರು ವಂಚನೆಯಿಂದ ಕಳವುಗೈದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತೋಟದ ಮಾಲಿಕ, ಮಣಿನಾಲ್ಕೂರು ಗ್ರಾಮದ ಪೂಂಜೂರು ನಿವಾಸಿ ಚಾಕೋ ವರ್ಗೀಸ್ ಎಂಬವರ ಪುತ್ರ ಅಜಿತ್ ಕೆ ಸಿ (47) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಮಣಿನಾಲ್ಕೂರು ಗ್ರಾಮದ ಪುಂಜೂರು ಎಂಬಲ್ಲಿ 3.48 ಎಕ್ರೆ ಹಾಗೂ ತನ್ನ ಹೆಂಡತಿಯ ಹೆಸರಿನಲ್ಲಿ 3.45 ಎಕ್ರೆ ಜಮೀನು ಹೊಂದಿದ್ದು, ಈ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಹೊಂದಿ ಅಡಿಕೆ ಕೃಷಿ ಮಾಡಿಕೊಂಡಿರುತ್ತಾರೆ. ಇವರ ಜಮೀನಿನಲ್ಲಿ ಕೊಯಿಲು ಮಾಡಿ ಇಳಿಸಿ ಒಣಗಿಸಿ ಸುಮಾರು 20 ಕೆಜಿ ತೂಕದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟಿದ್ದ ಅಡಿಕೆಯನ್ನು 2025ನೇ ಸಾಲಿನ ಜೂನ್ ಮೊದಲ ವಾರದಲ್ಲಿ ಅಡಿಕೆ ಸುಲಿಯಲು ಅವರ ಪರಿಚಯದ ಸುಳ್ಯ ನಿವಾಸಿ ಸಂದೀಪ್ ಎಂಬವರಿಗೆ ವಹಿಸಿಕೊಟ್ಟಿದ್ದರು. ಸಂದೀಪನು ಸುಧಾಕರ ಮತ್ತು 5 ಜನರನ್ನು ಕರೆದುಕೊಂಡು ಬಂದು ಮಣಿನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿರುವ ಅಜಿತ್ ಕೆ ಸಿ ಅವರ ಮನೆಯ ಬಳಿ ಅಡಿಕೆಯನ್ನು ಸುಲಿಯುತ್ತಿದ್ದರು. ಮನೆಯಲ್ಲಿ ಒಣಗಿಸಿಟ್ಟಿದ್ದ ಅಡಿಕೆಯನ್ನು ಜೂನ್ ತಿಂಗಳಿನ ಎರಡನೆ ವಾರದಲ್ಲಿ ಅಡಿಕೆ ಸುಲಿಯಲು ಪ್ರಾರಂಭಿಸಿದ್ದು ಜೂನ್ ತಿಂಗಳಿನಲ್ಲಿ ಒಟ್ಟು ಸುಮಾರು 300 ಪ್ಲಾಸ್ಟಿಕ್ ಚೀಲ ಅಡಿಕೆಯನ್ನು ಸುಲಿಯಲು ನೀಡಿದ್ದು ಅದನ್ನು ಸುಲಿದು ಕೊಟ್ಟಿರುತ್ತಾರೆ.
ಅಜಿತ್ ಅವರು ಪ್ರತಿದಿನ ಸುಲಿದ ಅಡಿಕೆಯನ್ನು ತೂಕ ಮಾಡಿಕೊಂಡು ಪಡೆದುಕೊಂಡಿರುತ್ತಾರೆ. ಒಂದು ಪ್ಲಾಸ್ಟಿಕ್ ಚೀಲದ ಒಣ ಅಡಿಕೆಗೆ ಅಂದಾಜು 11 ಕೆಜಿ ಸುಲಿದ ಅಡಿಕೆ ದೊರೆಯುತ್ತಿದ್ದು, 1 ಕೆಜಿ ಸುಲಿದ ಅಡಿಕೆಯ ಮೌಲ್ಯ ಸುಮಾರು 490/- ರೂಪಾಯಿ ಆಗಿರುತ್ತದೆ. ಅಂತೆಯೇ ಜುಲೈ ತಿಂಗಳ ಪ್ರಾರಂಭದಲ್ಲೇ ಅಜಿತ್ ಅವರು ಮತ್ತೆ 100 ಪ್ಲಾಸ್ಟಿಕ್ ಚೀಲ ಅಡಿಕೆಯನ್ನು ಸುಲಿಯಲು ನೀಡಿದ್ದು, ಜುಲೈ 3 ರಂದು ಬೆಳಿಗ್ಗೆ ಸುಲಿಯಲು ಬಾಕಿ ಇರುವ ಅಡಿಕೆಯ ಪ್ಲಾಸ್ಟಿಕ್ ಚೀಲಕ್ಕೂ ಮತ್ತು ಸುಲಿದ ಅಡಿಕೆಯ ತೂಕಕ್ಕೂ ಹೊಂದಾಣಿಕೆ ಮಾಡಿ ನೋಡಿದಾಗ ಇದರಲ್ಲಿ ಸುಲಿದ ಅಡಿಕೆ ತೂಕವು ಕಡಿಮೆ ಬಂದಿದೆ. 12 ಪ್ಲಾಸ್ಟಿಕ್ ಚೀಲ ಅಡಿಕೆ ಕಾಣೆಯಾಗಿರುವುದು ಕಂಡು ಬಂದಿದೆ. ಅಜಿತ್ ಅವರು ಮತ್ತೆ ಜುಲೈ ತಿಂಗಳಿನಲ್ಲಿ 200 ಪ್ಲಾಸ್ಟಿಕ್ ಚೀಲ ಅಡಿಕೆಯನ್ನು ಸುಲಿಯಲು ಕೊಟ್ಟಿದ್ದು, ಬಾಕಿ ಉಳಿದ ಒಣ ಅಡಿಕೆ ಪ್ಲಾಸ್ಟಿಕ್ ಚೀಲಗಳಿಗೆ ಮತ್ತು ಅವರು ಸುಲಿದು ನೀಡಿದ ಅಡಿಕೆಯನ್ನು ಜುಲೈ 22 ರಂದು ತಾಳೆ ಮಾಡಿ ನೋಡಿದಾಗ ಅದರಲ್ಲಿ 33 ಪ್ಲಾಸ್ಟಿಕ್ ಚೀಲ ಒಣ ಅಡಿಕೆ ಕಾಣೆಯಾಗಿರುವುದು ಕಂಡು ಬಂದಿದೆ. ಅಜಿತ್ ಅವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆಯನ್ನು ಸುಲಿಯುವ ಕೆಲಸ ಮಾಡಿಕೊಂಡಿದ್ದ ಸುಧಾಕರ ಎಂಬಾತ ಇತರರೊಂದಿಗೆ ಸೇರಿಕೊಂಡು 2.20 ಲಕ್ಷ ರೂಪಾಯಿ ಮೌಲ್ಯದ ಒಟ್ಟು 45 ಪ್ಲಾಸ್ಟಿಕ್ ಚೀಲದ 9 ಕ್ವಿಂಟಾಲ್ ಒಣ ಅಡಿಕೆಯನ್ನು ಕಳವು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment