ಬಂಟ್ವಾಳ, ಜುಲೈ 21, 2025 (ಕರಾವಳಿ ಟೈಮ್ಸ್) : ಕಾರು ಖರೀದಿಸಲು ಶ್ರೀರಾಮ ಫೈನಾನ್ಸ್ ಸಂಸ್ಥೆಯ ಬಿ ಸಿ ರೋಡು ಶಾಖೆಯಿಂದ ಸಾಲ ಪಡೆದು ಸಾಲ ಮರುಪಾವತಿ ಮಾಡದೆ ಬಳಿಕ ಸಂಸ್ಥೆಯ ಮೊಹರು, ಸಹಿ ನಕಲಿ ಮಾಡಿಕೊಂಡು ವಾಹನ ಮಾರಾಟ ಮಾಡಿ ವಂಚಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಶ್ರೀರಾಮ ಫೈನಾನ್ಸ್ ಸಂಸ್ಥೆಯ ಬಿ ಸಿ ರೋಡು ಶಾಖೆಯ ಮ್ಯಾನೇಜರ್ ಪುನೀತ್ ಕುಮಾರ್ ಅವರು ಠಾಣೆಗೆ ದೂರು ನೀಡಿದ್ದಾರೆ. 2023 ರ ಜೂನ್ 27 ರಂದು ಬಂಟ್ವಾಳ ತಾಲೂಕು, ಕುಡಲಡ್ಕ, ಬೇಡಗುಡ್ಡೆ ಭಜನಾ ಮಂದಿರ ಸಮೀಪದ ಸಾಯ ಮನೆ ನಿವಾಸಿ ಗಿರೀಶ್ ಬಿನ್ ಮಾಂಕು ಮೂಲ್ಯ ಎಂಬವರು ಕೆಎ09 ಎಂಎಚ್5940 ನೋಂದಣಿ ಸಂಖ್ಯೆಯ ಟೊಯೋಟ ಇನೋವಾ ಯೂರೋ 2015 ಮಾದರಿಯ ಕಾರು ಖರೀದಿಸಲು ಸಾಲದ ಕರಾರು ಪತ್ರದ ಶರತ್ತುಗಳಿಗೆ ಒಪ್ಪಿ ಸಹಿ ಮಾಡಿ 8.75 ಲಕ್ಷ ರೂಪಾಯಿ ಅಸಲು ಹಣವನ್ನು ಸಾಲದ ರೂಪದಲ್ಲಿ, ಬಡ್ಡಿ ಸಹಿತ ಒಟ್ಟು 13,07,663/- ರೂಪಾಯಿಗಳನ್ನು ಒಟ್ಟು 48 ಕಂತುಗಳಲ್ಲಿ ಮರುಪಾವತಿಸುವುದಾಗಿ ಒಪ್ಪಿ ಸಹಿ ಮಾಡಿ ಸಾಲ ಪಡೆದಿದ್ದು, ಸದ್ರಿ ಸಾಲಕ್ಕೆ ಬಿಳಿಯೂರು ಗ್ರಾಮದ ಮಂಜಿತೊಟ್ಟು ನಿವಾಸಿ ರಾಜೇಶ್ ರೈ ಬಿನ್ ವಿಠಲ್ ರೈ ಎಂಬವರು ಜಾಮೀನುದಾರರಾಗಿರುತ್ತಾರೆ.
ಸದ್ರಿ ಸಾಲ ಪಡೆದುಕೊಂಡ ತರುವಾಯ ಗಿರೀಶ ಇವರು ಸಾಲವನ್ನು ಮರುಪಾವತಿಸದೇ ಹಲವಾರು ಕಂತಿನ ಹಣವನ್ನು ಬಡ್ಡಿ ಸಮೇತ ಪಾವತಿಸಲು ವಿಫಲರಾಗಿದ್ದು, ಈ ಬಗ್ಗೆ ಪತ್ರ ಮುಖೇನ ಮತ್ತು ಸ್ವತಃ ಗಿರೀಶ್ ಮತ್ತು ಜಾಮೀನುದಾರರಲ್ಲಿ ಕಂತುಗಳನ್ನು ಮರುಪಾವತಿಸುವಂತೆ ಹಾಗೂ ವಾಹನವನ್ನು ವಶಕ್ಕೆ ನೀಡುವಂತೆ ಕೇಳಿದರೂ ಯಾವುದನ್ನೂ ಮಾಡಿರಲಿಲ್ಲ. ಈ ಬಗ್ಗೆ ವಾಹನದ ದಾಖಲೆ ಪರಿಶೀಲಿಸಿದಾಗ ಮಾಲಕತ್ವ ಬದಲಾವಣೆಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ 2025 ರ ಜೂನ್ 23 ರಂದು 11.30ಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ದಾಖಲೆಯನ್ನು ಪರಿಶೀಲಿಸಿದಾಗ ಗಿರೀಶ ಅವರು ರಾಜೇಶ್ ರೈ ಮತ್ತು ರೋಹಿತ್, ಮಂಜುನಾಥ್ ಇವರೊಂದಿಗೆ ಸೇರಿಕೊಂಡು ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸಂಸ್ಥೆಯ ನಕಲಿ ಲೆಟರ್ ಹೆಡ್, ಮೊಹರು ಹಾಗೂ ಸಹಿ ಬಳಸಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಯಾವುದೇ ಅನುಮತಿ ಇಲ್ಲದೆ ವಾಹನದ ಆರ್ ಸಿ ಪುಸ್ತಕದಲ್ಲಿ ಸಂಸ್ಥೆಯ ಸಾಲದ ನಮೂದನ್ನು ಅಳಿಸಿ ಹಾಕಿ ರೋಹಿತ್ ಮಂಜುನಾಥ್ ಅವರು ಸದ್ರಿ ವಾಹನವನ್ನು ಇಂದ್ರೇಶ್ ಕುಮಾರ್ ವಿ ಎಂಬವರಿಗೆ ವರ್ಗಾವಣೆ ಮಾಡಿ ಸಂಸ್ಥೆಗೆ ಮೋಸ, ವಂಚನೆ, ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2025 ಕಲಂ 318(2), 340(2), 318(4), 336(2), 336(3) ಜೊತೆಗೆ 3(5) ಬಿ ಎನ್ ಎಸ್-2023 ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment