ಬಂಟ್ವಾಳ, ಜುಲೈ 22, 2025 (ಕರಾವಳಿ ಟೈಮ್ಸ್) : ಸೋಮವಾರ (ಜುಲೈ 21) ಮುಂಜಾನೆ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ಪುರಸಭಾ ಸದಸ್ಯ, ಪರಿಶಿಷ್ಟ ಸಮಾಜದ ಮುಂಚೂಣಿ ನಾಯಕ, ಬಂಟ್ವಾಳ ಸಮೀಪದ ಚೆಂಡ್ತಿಮಾರ್ ನಿವಾಸಿ ಜನಾರ್ದನ ಚೆಂಡ್ತಿಮಾರ್ ಅವರ ಮೃತದೇಹದ ಅಂತ್ಯಕ್ರಿಯೇ ಸೋಮವಾರ ಅಪರಾಹ್ನ ಸುಮಾರು 2 ಗಂಟೆ ವೇಳೆಗೆ ಬಂಟ್ವಾಳ-ಬಡ್ಡಕಟ್ಟೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿದೆ.
ಮಾಜಿ ಸಚಿವ ಬಿ ರಮಾನಾಥ ರೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು, ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಚೆಂಡ್ತಿಮಾರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರಮಾನಾಥ ರೈಗಳು ಅವರ ಅಂತಿಮ ದರ್ಶನದ ವೇಳೆ ಅಕ್ಷರಶಃ ಭಾವುಕರಾಗಿ ಕಣ್ಣೀರಾದರು. ಪರಿಶಿಷ್ಟ ಸಮಾಜದ ಏಳಿಗೆಗಾಗಿ ಸದಾ ದುಡಿಯುತ್ತಿದ್ದ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸಕ್ರಿಯರಾಗಿದ್ದ ಜನಾರ್ದನ ಚೆಂಡ್ತಿಮಾರ್ ಅವರ ನಿಧನ ಸಮಾಜಕ್ಕೂ, ಸಮುದಾಯಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ತುಂಬಲಾರದ ನಷ್ಟ ಎಂದು ಕಣ್ಣೀರು ಹಾಕಿದರು.
ಆರೋಗ್ಯದ ತೀವ್ರ ಏರುಪೇರಿಗಾಗಿ ಜುಲೈ 21 ರ ಭಾನುವಾರ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದ ಜನಾರ್ದನ ಚೆಂಡ್ತಿಮಾರ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮುಂಜಾನೆ ವೇಳೆಗೆ ಕೊನೆಯುಸಿರೆಳೆದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರಿಗೆ ಸಂದೇಶ ನೀಡಿದ ರಮಾನಾಥ ರೈ ಅವರು, ಚೆಂಡ್ತಿಮಾರ್ ಅವರ ಅಂತಿಮ ದರ್ಶನಕ್ಕಾಗಿ ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಅಂಬೇಡ್ಕರ್ ಭವನ ನಿರ್ಮಾಣದಲ್ಲೂ ಚೆಂಡ್ತಿಮಾರ್ ಅವರ ಪಾತ್ರ ಮಹತ್ತರದ್ದಾಗಿದ್ದು, ಈ ನಿಟ್ಟಿನಲ್ಲಿ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಅಲ್ಲೇ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದರು. ಅದೇ ಪ್ರಕಾರ ಮಧ್ಯಾಹ್ನ 12 ಗಂಟೆ ವೇಳೆಗೆ ಚೆಂಡ್ತಿಮಾರ್ ಅವರ ಪಾರ್ಥಿವ ಶರೀರವನ್ನು ಬಿ ಸಿ ರೋಡಿನ ಅಂಬೇಡ್ಕರ್ ಭವನಕ್ಕೆ ತರಲಾಯಿತು. ಅಲ್ಲಿ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಬಳಿಕ ಅಲ್ಲಿಂದ ಅವರ ಚೆಂಡ್ತಿಮಾರ್ ಮನೆಗೆ ತಂದು ಬಳಿಕ ಬಡ್ಡಕಟ್ಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆ ಎಲ್ಲ ಪ್ರಕ್ರಿಯೆ ಮುಗಿಯುವವರೆಗೂ ರಮಾನಾಥ ರೈ ಅವರು ಕುಟುಂಬಸ್ಥರ ಜೊತೆಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಬಗ್ಗೆ ತನ್ನ ಜವಾಬ್ದಾರಿ ಮೆರೆದು ಮಾದರಿಯಾದರು.
ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಹಾಗೂ ಪುರಸಭೆಯ ಸರ್ವ ಸದಸ್ಯರುಗಳು, ಅಧಿಕಾರಿ, ಸಿಬ್ಬಂದಿ ವರ್ಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಪ್ರತಿಭಾ ಕುಳಾಯಿ, ಮಮತಾ ಗಟ್ಟಿ, ಬಿ ಎಂ ಅಬ್ಬಾಸ್ ಅಲಿ, ಎಂ ಎಸ್ ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಮಲ್ಲಿಕಾ ಶೆಟ್ಟಿ,
ಸದಾಶಿವ ಬಂಗೇರ, ತುಂಗಪ್ಪ ಬಂಗೇರ, ಹರಿಕೃಷ್ಣ ಬಂಟ್ವಾಳ, ದಿನೇಶ್ ಅಮ್ಟೂರು, ವೆಂಕಪ್ಪ ಬಂಟ್ವಾಳ, ಹರಿಯಪ್ಪ ಮುತ್ತೂರು, ವೆಂಕಣ್ಣ ಕೊಯ್ಯೂರು, ಶಿವಾನಂದ ಬಲ್ಲಾಳ್ ಬಾಗ್, ಶೇಖರ್ ಕುಕ್ಕೆಡಿ, ಗಣೇಶ್ ಪ್ರಸಾದ್, ಬೇಬಿ ಕುಂದರ್, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಮಾಯಿಲಪ್ಪ ಸಾಲ್ಯಾನ್, ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ ನವಾಝ್, ಶಿವರಾಜ್ ಪಿ ಬಿ, ಸಂಪತ್ ಕುಮಾರ್ ಶೆಟ್ಟಿ, ಮುಹಮ್ಮದ್ ನಂದಾವರ ಮೊದಲಾದವರು ಅಂತಿಮ ದರ್ಶನ ಪಡೆದು ತೀವ್ರ ಸಂತಾಪ ಸೂಚಿಸಿದರು.
0 comments:
Post a Comment