ಬಂಟ್ವಾಳ, ಜುಲೈ 01, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ 5ನೇ ವಾರ್ಡಿನ ಬಡ್ಡಕಟ್ಟೆ ಎಂಬಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಸಂಚಾರದ ವೇಳೆ ರಸ್ತೆಯಲ್ಲಿ ಹರಿಯುವ ನೀರು ರಸ್ತೆ ಬದಿಯ ಮನೆಗಳ ಒಳಗೆ ಅಭಿಷೇಕವಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ವರ್ಷಗಳಿಗಿಂತಲೂ ಅಧಿಕ ಸಮಯಗಳಿಂದ ಈ ವಾರ್ಡಿನ ರಸ್ತೆಗಳ ಅಂಚಿನಲ್ಲಿ ಚರಂಡಿ ನಿರ್ಮಿಸಲು ಪುರಸಭೆಗೆ ಸ್ಥಳೀಯರು ನಿರಂತರ ಮನವಿ ನೀಡುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮವಾಗಿ ಪ್ರತೀ ಮಳೆಗಾಲದಲ್ಲೂ ಇಲ್ಲಿನ ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು ವಾಹನಗಳ ಸಂಚಾರದ ವೇಳೆ ನೇರವಾಗಿ ರಸ್ತೆ ಬದಿಯಲ್ಲಿರುವ ಮನೆಗಳ ಒಳಗೆ ಎರಚುತ್ತಿರುವುದು ಮಾಮೂಲಿಯಾಗಿಬಿಟ್ಟಿದೆ ಎನ್ನುತ್ತಾರೆ ಮನೆ ಮಂದಿ.
ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಯಾಗಿರುವ ಬಡ್ಡಕಟ್ಟೆ ಜಂಕ್ಷನ್ ಪ್ರದೇಶ ಬಂಟ್ವಾಳ ಮುಖ್ಯ ಪೇಟೆ ಹಾಗೂ ಪುರಸಭಾ ಕಚೇರಿಯ ಕಿಲೋ ಮೀಟರ್ ಅಂತರದಲ್ಲಿದ್ದರೂ ಈ ಪ್ರದೇಶಕ್ಕೆ ಇದುವರೆಗೂ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಅಚ್ಚರಿಗೆ ಕಾರಣವಾಗಿದೆ. ಪ್ರತೀ ಬಾರಿಯೂ ಚುನಾವಣೆ ಸಂದರ್ಭದಲ್ಲೂ ಇಲ್ಲಿನ ಸಾರ್ವಜನಿಕರ ಬೇಡಿಕೆ ಈಡೇರಿಸುವ ಭರವಸೆ ನೀಡಿ ತೆರಳುವ ರಾಜಕೀಯ ಪಕ್ಷಗಳ ಪ್ರಮುಖರು ಚುನಾವಣೆ ಬಳಿಕ ಗೆದ್ದು ಬರುವ ಕೌನ್ಸಿಲರುಗಳ ಪತ್ತೆಯೇ ಇರುವುದಿಲ್ಲ. ಈ ಬಗ್ಗೆ ಮನವಿ ನೀಡಿದರೂ ಡೋಂಟ್ ಕ್ಯಾರ್ ಎನ್ನುತ್ತಿದ್ದಾರೆ ಎನ್ನುವ ಸ್ಥಳೀಯರು ಶೀಘ್ರದಲ್ಲಿ ಇಲ್ಲಿಗೆ ಚರಂಡಿ ವ್ಯವಸ್ಥೆ ಕಲ್ಪಿಸಿ ಬವಣೆ ನೀಗಿಸುವಂತೆ ಸ್ಥಳೀಯ ಮನೆ ಮಂದಿ ಆಗ್ರಹಿಸಿದ್ದಾರೆ.
0 comments:
Post a Comment