ಮಂಗಳೂರು, ಆಗಸ್ಟ್ 28, 2025 (ಕರಾವಳಿ ಟೈಮ್ಸ್) : ಕರ್ನಾಟಕ ಮಾಧ್ಯಮ ಅಕಾಡೆಮಿಯು ಚಿತ್ರದುರ್ಗ ಪತ್ರಕರ್ತರ ಭವನದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್.ಸಿ.-ಎಸ್.ಟಿ. ಪತ್ರಿಕಾ ಸಂಪಾದಕರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಗಸ್ಟ್ 30ರಂದು “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂಸದ ಗೋವಿಂದ ಎಂ. ಕಾರಜೋಳ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ “ಅಂಬೇಡ್ಕರ್ ಅವರ ಪತ್ರಿಕಾ ವೃತ್ತಿ” ವಿಷಯದ ಕುರಿತು ಪತ್ರಕರ್ತರಾದ ಎನ್. ರವಿಕುಮಾರ್, “ಪತ್ರಕರ್ತರಾಗಿ ಅಂಬೇಡ್ಕರ್ ಅವರ ಬರವಣಿಗೆಗಳು” ವಿಷಯದ ಕುರಿತು ವಿ.ಎಲ್. ನರಸಿಂಹಮೂರ್ತಿ, “ಅಂಬೇಡ್ಕರ್ ದೃಷ್ಟಿಯಲ್ಲಿ ಲಿಂಗಸಮಾನತೆ” ಕುರಿತು ಡಾ. ಭಾರತಿದೇವಿ ಹಾಗೂ ಪತ್ರಕರ್ತರಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ವಿಷಯದ ಕುರಿತು ರಿಷಿಕೇಶ್ ಬಹದ್ದೂರ್ ದೇಸಾಯಿ ವಿಷಯ ಮಂಡಿಸಲಿದ್ದಾರೆ. ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಕ್ರಾಂತಿಕಾರಿ ಚಿಂತನೆಗಳು, ಇಂದಿನ ದಿನದಲ್ಲಿಯೂ ಅವುಗಳ ಪ್ರಸ್ತುತತೆ, ಪತ್ರಕರ್ತರಾಗಿ ಅವರ ಕೊಡುಗೆ ಮತ್ತು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣಕ್ಕೆ ಮುಂದಿನ ಹಾದಿ ಮುಂತಾದ ವಿಷಯಗಳ ಚರ್ಚೆಗೆ ಈ ವಿಚಾರ ಸಂಕಿರಣವು ವೇದಿಕೆಯಾಗಲಿದೆ. ಪತ್ರಕರ್ತರು ಹಾಗೂ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಹಾಗೂ ಕಾರ್ಯದರ್ಶಿ ಸಹನಾ ಎಂ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment