ಬಂಟ್ವಾಳ, ಆಗಸ್ಟ್ 26, 2025 (ಕರಾವಳಿ ಟೈಮ್ಸ್) : ನಶಿಸಿ ಹೋಗುತ್ತಿರುವ ಪಾರಂಪರಿಕ ನಿತ್ಯೋಪಯೋಗಿ ಕರಕುಶಲ ವಸ್ತುಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಇಂಟಕ್ ಸಂಸ್ಥೆಯು ಬಹುದೊಡ್ಡ ಜಾಗೃತಿಯನ್ನು ಮೂಡಿಸುತ್ತಿದೆ. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯ ಮುಖೇನ ಆದಿವಾಸಿಗಳ, ಬುಡಕಟ್ಟು ಜನಾಂಗಗಳ ಹಾಗೂ ಸಾಂಪ್ರದಾಯಿಕವಾದ ಅದೆಷ್ಟೋ ಕೌಶಲಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹತ್ತರ ಯೋಜನೆಯು ದಾಖಲಾಗುತ್ತಿದೆ. ಅಂತಹ ಕಲೆಗಳಲ್ಲಿ ಬುಟ್ಟಿ ತಯಾರಿಕೆಯೂ ಒಂದು. ಈ ಕಲೆಯನ್ನು ಎಲ್ಲರಿಗೂ ತಿಳಿಸಬೇಕೆನ್ನುವ ನೆಲೆಯಲ್ಲಿ ಸಾಂಪ್ರದಾಯಿಕ ಬುಟ್ಟಿ ತಯಾರಿಕಾ ಕಾರ್ಯಾಗಾರವನ್ನು ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
ಇಂಟಕ್ ಮಂಗಳೂರು ವಿಭಾಗದ ಮುಖ್ಯಸ್ಥ ಸುಭಾಷ್ ಚಂದ್ರ ಬಸು ಮಾತನಾಡಿ, ಆದಿಯಿಂದ ಬೆಳೆದುಕೊಂಡು ಬಂದಿರುವ ಪಾರಂಪರಿಕ ಕಲೆಗಳನ್ನು ಮುಂದಿನ ದಿನಗಳಿಗೂ ವಿಸ್ತರಿಸುವ ಅವಶ್ಯಕತೆ ತುಂಬಾ ಇದೆ. ಮೂಲ ಕಲೆಯ ಕೌಶಲ್ಯಗಳನ್ನು ಹೊಂದಿರುವ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಿಸುವ ಪ್ರಯತ್ನಗಳಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಮಂಚಿ ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ದೇವಕಿ ಎಚ್ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಕೌಶಲ್ಯ ಭರಿತ ತರಬೇತಿ ಕಾರ್ಯಕ್ರಮವು ಜೀವನೋಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಹಸ್ತ ಕೌಶಲ್ಯವನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ಪಾರಂಪರಿಕ ವಸ್ತುಗಳನ್ನು ಉಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಂತಾಗುತ್ತದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ ರಾವ್ ಮಂಚಿ ಮಾತನಾಡಿ, ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ತರಬೇತಿ, ಮಾರ್ಗದರ್ಶನಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಹಾಗೂ ಸೃಜನಶೀಲ ಅಭಿವ್ಯಕ್ತಿಗಳಿಗೆ ಕಾರಣವಾಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಮನೋವಿಕಾಸದ ಜೊತೆ ವ್ಯಕ್ತಿತ್ವದ ನಿರ್ಮಾಣವು ಸಾಧ್ಯವಾಗುತ್ತದೆ ಎಂದರು
ಕಾರ್ಯಕ್ರಮದಲ್ಲಿ ಮಂಚಿ-ಕೊಳ್ನಾಡು ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಪ್ರಸಾದ್ ರೈ ತಿರುವಾಜೆ, ಇಂಟಕ್ ಮಂಗಳೂರು ವಿಭಾಗದ ಸಂಯೋಜಕ ರಾಜೇಂದ್ರ ಕೇದಿಗೆ, ಹರೀಶ್ ಕೊಡಿಯಾಲ್ ಬೈಲು, ರೇಷ್ಮಾ ಶೆಟ್ಟಿ, ಶರ್ವಾಣಿ ಭಟ್ ಹಾಗೂ ಶಾಲಾ ಶಿಕ್ಷಕ ವೃಂದ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಕೊರಗ ಗುತ್ತಕಾಡು ಮತ್ತು ಸುಪ್ರಿಯಾ ಅವರಿಂದ ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ ಮೂಲಕ ಪ್ರಾಯೋಗಿಕ ಕಾರ್ಯಗಾರ ನಡೆಯಿತು. ಮಂಚಿ ವಲಯದ ಏಳು ಶಾಲೆಗಳಿಂದ 67 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಮಂಚಿ-ಕೊಳ್ನಾಡು ಪ್ರೌಢಶಾಲಾ ಇಂಟಕ್ ಹೆರಿಟೇಜ್ ಕ್ಲಬ್ ಸಂಯೋಜಕ ಹಾಗೂ ಚಿತ್ರಕಲಾ ಕಲಾವಿದ ತಾರಾನಾಥ್ ಕೈರಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಂದಿಸಿದರು.

































0 comments:
Post a Comment