ಮಂಗಳೂರು, ಆಗಸ್ಟ್ 10, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಮುಕ್ತ ಮಂಗಳೂರು ಅಭಿಯಾನದಡಿಯಲ್ಲಿ ಆಗಸ್ಟ್ 8 ರಂದು ಕುದ್ರೋಳಿ-ಖಂಡತ್ ಪಳ್ಳಿ ಪರಿಸರದಲ್ಲಿ ಹಲವಾರು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳು, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗುಪ್ತವಾಗಿ ನಿರಂತರ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಬ್ದುಲ್ ಸಮದ್ ಅಲಿಯಾಸ್ ಚಮ್ಮು ಎಂಬಾತನನ್ನು ದಸ್ತಗಿರಿ ಮಾಡಿದ ಪೊಲೀಸರು ಆತನಿಂದ 1.40 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕೊಲ್ನಾಡು ಲಿಂಗಪಾಯ್ಯನಕಾಡು ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು, ಆರೋಪಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಧರ್ಮಲಿಂಗ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನ ಬಳಿಯಿದ್ದ ಸುಮಾರು 1.90 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾ.ರೆ ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಬಂದು ಸ್ಥಳೀಯ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಪೊಲೀಸರು ಮರವೂರು ಎಂಬಲ್ಲಿ ದಾಳಿ ನಡೆಸಿ ಬಿಹಾರ ಮೂಲದ ಆರೋಪಿಗಳಾದ ದೋಲತ್ ಕುಮಾರ್ ಶರ್ಮಾ, ಹಾಗೂ ಮಹಮ್ಮದ್ ಖುಷಲಂ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಆತನ ಬಳಿಯಲ್ಲಿದ್ದ ಸುಮಾರು 1.189 ಕೆಜಿ ಗಾಂಜಾ ಮತ್ತು 219 ಗ್ರಾಂ ಬಾಂಗ್ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಕನಾಡಿ ಪೊಲಿಸ್ ಠಾಣಾ ವ್ಯಾಪ್ತಿಯ ಪಡೀಲ್ ಸಮೀಪ ಗಾಂಜಾವನ್ನು ಹೊಂದಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಗಳಾದ ಕಾರ್ತಿಕ್ ಹಾಗೂ ಮೋಹಿತ್ ಎಂಬವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಅವರಲ್ಲಿದ್ದ 800 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಕೇರಳ ಮೂಲದ ಪ್ರಣವ್ ಕೆ ವಿ ಮಲಪ್ಪುರಂ ಎಂಬಾತನು ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿಧ್ಯಾಭ್ಯಾಸ ಮಾಡಿಕೊಂಡಿದ್ದು, ಈತನು ಹಲವಾರು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಗುಪ್ತವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 1.100 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈತನಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರು ನಗರದಲ್ಲಿ ಅಕ್ರಮ ಮಾದಕ ವಸ್ತು ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಸಾರ್ವಜನಿಕರಿಗೆ ನಿರಂತರ ಮಾರಾಟ ಮಾಡುತ್ತಿರುವವರ ಬಗ್ಗೆ ಆರೋಪಿಗಳು ಗಾಂಜಾವನ್ನು ಮಾರಾಟ ಮಾಡಲು ತರುತ್ತಿದ್ದ ಇತರ ಮೂಲಗಳ ಬಗ್ಗೆಯೂ ಸಹಾ ಈ ಮೇಲ್ಕಂಡ ಪ್ರಕರಣಗಳ ತನಿಖೆಯ ಸಮಯ ಖಚಿತ ಮಾಹಿತಿ ದೊರೆತಿರುತ್ತದೆ ಮತ್ತು ದಸ್ತಗಿರಿಯಾದ ಈ ಎಲ್ಲಾ ಆರೋಪಿಗಳಿಂದ ಗಾಂಜಾವನ್ನು ಖರೀದಿಸಿದ ಹಲವಾರು ವ್ಯಕ್ತಿಗಳ ವಿವರಗಳು ಕೂಡಾ ಲಭ್ಯವಾಗಿದ್ದು, ಇವರೆಲ್ಲರನ್ನು ಪತ್ತೆ ಹಚ್ಚಲು ಠಾಣಾ ವ್ಯಾಪ್ತಿಗಳಲ್ಲಿ ಈಗಾಗಲೇ ತಂಡಗಳನ್ನು ರಚಿಸಿದ್ದು, ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿರುತ್ತಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
0 comments:
Post a Comment