ಬಂಟ್ವಾಳ, ಆಗಸ್ಟ್ 28, 2025 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಪೇಟೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿ 13 ವರ್ಷದ ಅಪ್ರಾಪ್ತ ಬಾಲಕನೋರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾಣೆಮಂಗಳೂರು ಪೇಟೆ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ಸುಮಾರು 7.30-8 ಗಂಟೆಯ ವೇಳೆ ರಸ್ತೆಯಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಅಪಮಾನವಾಗುವ ರೀತಿಯಲ್ಲಿ ಅಪರಿಚಿತ ಸ್ಕೂಟರ್ ಸವಾರನೋರ್ವ ಕೃತ್ಯ ಎಸಗಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2025, ಕಲಂ 74 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿತ್ತು.
ಸಾರ್ವಜನಿಕವಾಗಿ ಗಂಭೀರ ಆರೋಪಗಳು ವ್ಯಕ್ತವಾಗಿದ್ದು, ಪೊಲೀಸರಿಗೆ ಸವಾಲಾಗಿದ್ದ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸ್ಥಳೀಯವಾಗಿ ಕೆಲವು ಸೀಸಿ ಟಿವಿ ಫೂಟೇಜುಗಳನ್ನು ಪರಿಶೀಲನೆ ನಡೆಸಿ ಕೊನೆಗೂ ಆಗಸ್ಟ್ 26 ರಂದು ಆರೋಪಿ ಬಾಲಕನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
ಆರೋಪಿ ಬಾಲಕ ಸ್ಕೂಟರಿನಲ್ಲಿ ಬಂದು ರಸ್ತೆಯಲ್ಲಿ ರಾತ್ರಿ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪಾಣೆಮಂಗಳೂರು ಪೇಟೆ ಬಳಿ ತನ್ನ ಪೊಷಕರ ಜೊತೆ ವಾಸವಾಗಿರುವ 13 ವರ್ಷದ ಬಾಲಕನು ಈ ಕೃತ್ಯ ಎಸಗಿರುವುದು ಲಭ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಆ 26 ರಂದು ಆತನ ಸ್ವ ಗೃಹದಲ್ಲಿ ತಾಯಿಯ ಸಮಕ್ಷಮ ವಿಚಾರಿಸಿ ಹೇಳಿಕೆ ಪಡೆದು, ಮಂಗಳೂರು ಬಾಲನ್ಯಾಯ ಮಂಡಳಿ ಸಮಕ್ಷಮಕ್ಕೆ ಹಾಜರುಪಡಿಸಲಾಗಿದ್ದು, ಬಾಲ ನ್ಯಾಯಾಲಯವು ಬಾಲಕನನ್ನು ಸೆ 2ವರೆಗೆ ಪರಿವೀಕ್ಷಣಾ ಮಂದಿರಕ್ಕೆ ಬಿಡುವಂತೆ ಆದೇಶ ಮಾಡಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment