ಮಂಗಳೂರು, ಸೆಪ್ಟೆಂಬರ್ 21, 2025 (ಕರಾವಳಿ ಟೈಮ್ಸ್) : ಬ್ಯಾರಿ ಬರಹಗಾರ-ಕಲಾವಿದರ ಕೂಟ (ಮೇಲ್ತೆನೆ) ದೇರಳಕಟ್ಟೆ ಇದರ ದಶಮಾನೋತ್ಸವದ ಪ್ರಯುಕ್ತ ನೀಡಲಾಗುವ ‘ಮೇಲ್ತೆನೆ’ ಪ್ರಶಸ್ತಿಗೆ ಹಿರಿಯ ಗಾಯಕ, ಕಲಾವಿದ ರಹೀಂ ಬಿ ಸಿ ರೋಡು ಆಯ್ಕೆಯಾಗಿದ್ದಾರೆ.
ಸೆಪ್ಟಂಬರ್ 30 ರಂದು ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್ಸಿನಲ್ಲಿ ನಡೆಯುವ ಮೇಲ್ತೆನೆ ಪತ್ತನೆ ವರ್ಸತ್ತೆ ಜಲ್ಸ್-ಲೇಸ್-2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೇಲ್ತೆನೆಯ ಅಧ್ಯಕ್ಷ ವಿ ಇಬ್ರಾಹೀಂ ನಡುಪದವು ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ರಹೀಂ ಬಿ ಸಿ ರೋಡು ಎಂದೇ ಪರಿಚಿತರಾಗಿರುವ ಅಬ್ದುಲ್ ರಹೀಂ ಯಾಬೆ ಅದ್ದಾಮ ಅವರು ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಇನೋಳಿಯಲ್ಲಿ ಬೋಳಿಯಾರು ಅಬ್ದುಲ್ ಖಾದರ್-ಫರಂಗಿಪೇಟೆಯ ಉಮ್ಮಾತುಮ್ಮ ದಂಪತಿಯ ಪುತ್ರನಾಗಿ 1957ರಲ್ಲಿ ಜನಿಸಿದ್ದು, ಇನೋಳಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ಮತ್ತು ಮಡಿಕೇರಿಯ ಸರಕಾರಿ ಶಾಲೆಯಲ್ಲಿ 10ನೆ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ಬಿ ಸಿ ರೋಡಿಗೆ ಬಂದು ನೆಲೆಸಿರುವ ಇವರು ಬಳಿಕ ರಹೀಂ ಬಿ ಸಿ ರೋಡು ಎಂದೇ ಚಿತರಪರಿಚಿತರಾಗಿದ್ದಾರೆ.
ಎಳೆಯ ಪ್ರಾಯದಲ್ಲೇ ಹಾಡುವ ಅಭಿರುಚಿ ಹೊಂದಿದ್ದ ರಹೀಂ ಬಳಿಕ ಗಾಯನವನ್ನೇ ಬದುಕನ್ನಾಗಿಸಿಕೊಂಡರು. ಮದುವೆ, ಮುಂಜಿ ಸಹಿತ ಬೀಡಿ ಉದ್ಯಮದ ಪ್ರಚಾರಕ್ಕೆ ಸಂಬಂಧಿಸಿ ಬ್ಯಾರಿ, ತುಳು, ಕನ್ನಡದಲ್ಲಿ ಗೀತೆ ರಚಿಸಿದ್ದ ರಹೀಂ ಬಿ ಸಿ ರೋಡು ಸುಮಾರು 1 ಸಾವಿರಕ್ಕೂ ಅಧಿಕ ವೇದಿಕೆಗಳಲ್ಲಿ ಹಾಡಿದ್ದಾರೆ. ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2010ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಲವು ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.
0 comments:
Post a Comment