ಬಂಟ್ವಾಳ, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ಯಾವುದೇ ಪರವಾನಿಗೆ ಇಲ್ಲದೆ ಮಂಜೇಶ್ವರದಿಂದ ಅಕ್ರಮ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸರು ಬೇಧಿಸಿದ ಘಟನೆ ಬಿ ಮೂಡ ಗ್ರಾಮದ ಮಯ್ಯರಬೈಲ್ ಎಂಬಲ್ಲಿ ಸೆ 7 ರಂದು ನಡೆದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಶೆಟ್ಟಿ ಅವರು ಸಿಬ್ಬಂದಿಗಳೊಂದಿಗೆ ಬಿ ಮೂಡ ಗ್ರಾಮದ ಮಯ್ಯರಬೈಲ್ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಬಿ ಸಿ ರೋಡು ಕಡೆಯಿಂದ ತುಂಬ್ಯಾ ಜಂಕ್ಷನ್ ಕಡೆಗೆ ಬರುತ್ತಿದ್ದ ಲಾರಿ ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇಸ್ಮಾಲಿ ಎಂಬವರು ಚಲಾಯಿಸಿಕೊಂಡು ಬಂದ ಲಾರಿಯಲ್ಲಿ ಈ ಅಕ್ರಮ ಸಾಗಾಟ ಮಾಡುತ್ತಿದ್ದ ಕೆಂಪು ಕಲ್ಲು ಪತ್ತೆಯಾಗಿದೆ. ಮಂಜೇಶ್ವರ ಬಾಯಾರು-ಧರ್ಮತ್ತಡ್ಕ ಎಂಬಲ್ಲಿಂದ ಮಂಜೇಶ್ವರ ಕೆಂಪು ಕಲ್ಲು ಕೋರೆಯ ಮಾಲಕ ನಾಸಿರ್ ಎಂಬಾತನ ಕೋರೆಯಿಂದ ಈ ಕೆಂಪು ಕಲ್ಲು ಲೋಡ್ ಮಾಡಿ ತಂದಿರುವುದಾಗಿ ಚಾಲಕ ಇಸ್ಮಾಲಿ ಪೊಲೀಸರೊಂದಿಗೆ ಒಪ್ಪಿಕೊಂಡಿದ್ದಾನೆ.
ದಾಳಿ ವೇಳೆ ಪೊಲೀಸರು 3 ಸಾವಿರ ರೂಪಾಯಿ ಮೌಲ್ಯದ ಕೆಂಪು ಕಲ್ಲು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment