ಮಂಗಳೂರು, ಅಕ್ಟೋಬರ್ 03, 2025 (ಕರಾವಳಿ ಟೈಮ್ಸ್) : ದೇರಳಕಟ್ಟೆಯ ಬ್ಯಾರಿ ಎಲ್ತ್‍ಕಾರ್-ಕಲಾವಿದಮಾರೊ ಕೂಟ (ಮೇಲ್ತೆನೆ) ಇದರ ವತಿಯಿಂದ ನಾಟೆಕಲ್ ಎಲೈಟ್ ಟ್ಯೂಶನ್ ಸೆಂಟರಿನಲ್ಲಿ ಶುಕ್ರವಾರ ಬ್ಯಾರಿ ಭಾಷಾ ದಿನಾಚಣೆ ಅ 3 ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮೇಲ್ತೆನೆ ಗೌರವಾಧ್ಯಕ್ಷ ಆಲಿಕುಂಞÂ ಪಾರೆ ಮಾತನಾಡಿ, ಆಧುನಿಕ ಭರಾಟೆಯ ಮಧ್ಯೆಯೂ ಜನಸಾಮಾನ್ಯರ ದಿನಬಳಕೆಯ ಆಡು ಮಾತುಗಳಿಂದ ಈವತ್ತು ಪ್ರಾದೇಶಿಕ ಭಾಷೆಗಳು ಉಳಿಯಲು ಸಾಧ್ಯವಾಗಿದೆ. ಉನ್ನತ ಶಿಕ್ಷಣ ಪಡೆದ ಹೆಚ್ಚಿನವರಲ್ಲಿ ಆಂಗ್ಲ ಭಾಷೆಯ ಮೇಲೆ ವ್ಯಾಮೋಹ ಹೆಚ್ಚಿದೆ. ಆದರೆ ಕೂಲಿ ಕಾರ್ಮಿಕರು, ಸಣ್ಣಪುಟ್ಟ ಕೆಲಸ ಮಾಡುವವರು ಮಾತೃ ಭಾಷೆಯಲ್ಲೇ ದಿನನಿತ್ಯ ವ್ಯವಹರಿಸುತ್ತಾರೆ. ಹಾಗಾಗಿ ಭಾಷಾ ದಿನಾಚರಣೆಯ ಸಂದರ್ಭ ಅಂತಹವರನ್ನು ಗುರುತಿಸಿ ಗೌರವಿಸುವ ಪ್ರಯತ್ನ ಆಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್, ಭಾಷೆಯ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಅಪಾರವಿದೆ. ತಾಯಿಯಿಂದಲೇ ಮಕ್ಕಳು ಮಾತೃ ಭಾಷೆಯನ್ನು ಕಲಿಯುತ್ತಾರೆ. ಹಾಗಾಗಿ ತಾಯಂದಿರಿಲ್ಲದ ಭಾಷಾ ದಿನಾಚರಣೆಯು ಅರ್ಥಪೂರ್ಣವಾಗದು. ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾರಿ ಸಂಘಟನೆಗಳು ತಾಯಂದಿರನ್ನು ಒಳಗೊಂಡಂತೆ ಕಾರ್ಯಕ್ರಮಗಳು ಆಯೋಜಿಸಲು ಕ್ರಮ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಮೇಲ್ತೆನೆ ಅಧ್ಯಕ್ಷ ವಿ ಇಬ್ರಾಹಿಂ ನಡುಪದವು ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಇಬ್ರಾಹಿಂ ರಫೀಕ್ ಮುದುಂಗಾರುಕಟ್ಟೆ, ರಫೀಕ್ ಕಲ್ಕಟ್ಟ ಪಾಲ್ಗೊಂಡಿದ್ದರು. ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿ, ಮಾಜಿ ಅಧ್ಯಕ್ಷ ಟಿ ಇಸ್ಮಾಯಿಲ್ ಮಾಸ್ಟರ್ ವಂದಿಸಿದರು. ಬಶೀರ್ ಕಲ್ಕಟ್ಟ ಕಾರ್ಯಕ್ರಮ ನಿರೂಪಿಸಿದರು.




















0 comments:
Post a Comment