ಬಂಟ್ವಾಳ, ಅಕ್ಟೋಬರ್ 05, 2025 (ಕರಾವಳಿ ಟೈಮ್ಸ್) : ಕೆಲಸ ಬಿಟ್ಟು ಮನೆಗೆ ತೆರಳಲು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಬೈಕ್ ಸವಾರನೋರ್ವ ಚಿನ್ನದ ಸರ ಎಗರಿಸಿದ ಘಟನೆ ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿ ಚೆನ್ನಪ್ಪ ಗೌಡ ಅವರ ಪತ್ನಿ ಶ್ರೀಮತಿ ಸರಸ್ವತಿ (60) ಅವರು ಕಲ್ಲಡ್ಕ ಶ್ರೀರಾಮ ವಾಣಿಜ್ಯ ಸಂಕೀರ್ಣದ ಕುಶಿ ಸ್ವೀಟ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿದಿನ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿ ಸಂಜೆ ವೇಳೆ ಮನೆಗೆ ಮರಳಿ ಬರುತ್ತಿದ್ದರು. ಎಂದಿನಂತೆ ಶನಿವಾರ ಸಂಜೆ ಕೂಡಾ ಕೆಲಸ ಬಿಟ್ಟು ಬಸ್ಸಿನಲ್ಲಿ ಬಂದು ದಾಸಕೋಡಿ ಎಂಬಲ್ಲಿ ಬಸ್ಸಿನಿಂದ ಇಳಿದು ಮನೆ ಕಡೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಸ್ಸಿನ ಹಿಂಬದಿಯಿಂದ ಅಂದರೆ ಕಲ್ಲಡ್ಕ ಕಡೆಯಿಂದ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಇವರ ಹತ್ತಿರ ಬಂದು ಬೈಕ್ ನಿಲ್ಲಿಸಿ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಸೂರಿಕುಮೇರು ಕಡೆಗೆ ಅದೇ ಬೈಕಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಅಪರಿಚಿತ ಕಸಿದುಕೊಂಡು ಹೋಗಿರುವ ಚಿನ್ನದ ಸರದ ಮೌಲ್ಯ75 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment