ಮಂಗಳೂರು, ಅಕ್ಟೋಬರ್ 02, 2025 (ಕರಾವಳಿ ಟೈಮ್ಸ್) : ಸ್ವಾತಂತ್ರ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಸ್ಮರಣೀಯ. ಯುವಜನತೆ ಗಾಂಧೀಜಿಯವರ ಸಂದೇಶವನ್ನು ಅರ್ಥೈಸಿಕೊಂಡು ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ರಾಜ್ಯ ಅರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಾರ್ವಜನಿಕ ಶಿಕ್ಷಣ ಇಲಾಖೆ ಭಾರತ ಸೇವಾದಳ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ರಾಜಾಜಿ ಪಾರ್ಕಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಗಾಂಧೀಜಿಯವರು ಅಸ್ಪೃಶ್ಯತೆ ವಿರುದ್ಧ ಮತ್ತು ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಬಡವರಿಗೆ ತಮ್ಮ ಹಕ್ಕುಗಳನ್ನು ದೊರಕಿಸುವಲ್ಲಿ ಅವರ ಪಾತ್ರ ಶ್ಲಾಘನೀಯ. ಮಹಾತ್ಮ ಗಾಂಧೀಜಿ ಅವರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ವಿದ್ಯಾರ್ಥಿಗಳು ಗಾಂಧೀಜಿಯ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜನರು ಪರಸ್ಪರ ಸಹೋದರತ್ವ, ಪ್ರೀತಿ ಗೌರವವನ್ನು ನೀಡುವ ಮೂಲಕ ಸಹಬಾಳ್ವೆಯಿಂದ ಇದ್ದರೆ ನಮ್ಮ ದೇಶದಲ್ಲಿ ನಡೆಯುವ ಹಿಂಸಾತ್ಮಕ ಘಟನೆಗಳನ್ನು ತಪ್ಪಿಸಬಹುದು ಎಂದು ಸಚಿವರು ಹೇಳಿದರು.
ಗಾಂಧಿ ಜಯಂತಿ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳು ಗಾಂಧೀಜಿಯವರ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ತಿಳಿಯುವಂತಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಸಚಿವರು ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಪೆÇಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪೆÇಲೀಸ್ ಅಧೀಕ್ಷಕ ಡಾ ಕೆ ಅರುಣ್, ಭಾರತ ಸೇವಾದಳ ಕೇಂದ್ರ ನಿರ್ದೇಶಕ ಬಶೀರ್ ಬೈಕಂಪಾಡಿ, ಟಿ ಕೆ ಸುಧೀರ್ ಮೊದಲಾದವರು ಭಾಗವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಸ್ವಾಗತಿಸಿ, ಸೈದುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
























0 comments:
Post a Comment