ರಮಾನಾಥ ರೈ ನೇತೃತ್ವದಲ್ಲಿ ನಡೆದ ಮತ ಕಳ್ಳತನ ವಿರುದ್ದದ ಪಂಜಿನ ಮೆರವಣಿಗೆಯಲ್ಲಿ ಬಿಜೆಪಿ ವಿರುದ್ದ ಗುಡುಗಿದ ಕಾರ್ಮಿಕ ಸಚಿವರು
ಬಂಟ್ವಾಳ, ಅಕ್ಟೋಬರ್ 10, 2025 (ಕರಾವಳಿ ಟೈಮ್ಸ್) : ಹಿಂದೂ ಹಿಂದೂ, ಹಿಂದುತ್ವ ಎಂದು ಬೆಳಿಗ್ಗೆಯಿಂದ ರಾತ್ರಿವರೆಗೆ ಜಪಿಸುವ ಬಿಜೆಪಿಗರು ತಾಕತ್ತಿದ್ದರೆ ಮೇಲ್ವರ್ಗದ ಜನ ಕೆಳ ವರ್ಗದವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿಕೊಳ್ಳುವಂತೆ ವ್ಯವಸ್ಥೆ ರೂಪಿಸಲಿ. ಕೆಳವರ್ಗದ ಸ್ವಾಮಿಗಳನ್ನು ಕರೆಸಿ ಪೂಜೆ-ಹವನ ಮಾಡಿಸಿ ನೋಡೋಣ. ಆ ಮೂಲಕ ತಮ್ಮ ಹಿಂದುತ್ವದ ನೈಜ ರೂಪ ಅನಾವರಣಗೊಳ್ಳಲಿ ಎಂದು ರಾಜ್ಯ ಕಾರ್ಮಿಕ ಇಲಾಖಾ ಸಚಿವ ಸಂತೋಷ್ ಲಾಡ್ ಸವಾಲೆಸೆದರು.
ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ ಕಾಂಗ್ರೆಸ್ ವತಿಯಿಂದ ಶುಕ್ರವಾರ ರಾತ್ರಿ ಕೈಕಂಬ-ಪೊಳಲಿ ದ್ವಾರದಿಂದ ಬಿ ಸಿ ರೋಡು ಜಂಕ್ಷನ್ ವರೆಗೆ ನಡೆದ ಬೃಹತ್ ಪಂಜಿನ ಮೆರವಣಿಗೆಯ ಬಳಿಕ ಮಿನಿ ವಿಧಾನಸೌಧ ಮುಂಭಾಗ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಸಲ್ಮಾನ, ಪಾಕಿಸ್ತಾನ, ಅಫಘಾನಿಸ್ತಾನ ಈ ಮೂರು ಪದಗಳನ್ನು ಬಿಟ್ರೆ ಬಿಜೆಪಿಗರಿಗೆ ರಾಜಕೀಯ ನಡೆಸಲು ಬೇರೆ ಯಾವುದೇ ವಿಷಯಗಳೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾಷಣದುದ್ದಕ್ಕೂ ಬಿಜೆಪಿ ವಿರುದ್ದ ಗುಡುಗಿದ ಸಚಿವ ಸಂತೋಷ್ ಲಾಡ್ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಿದ ಜನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವುದರ ಹಿಂದೆ ಬೇಕಾಬಿಟ್ಟಿ ಮತ ಹೆಚ್ವಳ ಕಾರಣ. ಮತಕಳ್ಳತನ ಹಾಗೂ ಸುಳ್ಳುಗಳೇ ಬಿಜೆಪಿಗರ ರಾಜಕಾರಣದ ಮೂಲ ಸೊತ್ತಾಗಿದೆ ಎಂದು ಕುಟುಕಿದರು.
ದೇಶದಲ್ಲಿ ಕೇವಲ ಮೂವತ್ತೈದು ಶೇಕಡಾ ಮತ ಮಾತ್ರ ಬಿಜೆಪಿ ಪರವಾಗಿದೆ. ದೇಶವಿಡೀ ಬಿಜೆಪಿ ಪರವಾಗಿಲ್ಲ ಎಂದ ಸಚಿವ ಲಾಡ್, ಬಿಹಾರದಲ್ಲಿ ಸೋಲಿನ ಬೀತಿಯಲ್ಲಿ ಪ್ರಧಾನಿ ವ್ಯಾಪಕ ಅನುದಾನ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಹಲ್ಗಾಂ ದಾಳಿ ಸಂದರ್ಭ ಮೋದಿ ನೇತೃತ್ವದ ಕೇಂದ್ರ ಸರಕಾರ ಒಂದೇ ಒಂದು ಏರ್ ಕ್ರಾಫ್ಟ್ ಮಾಡಿಲ್ಲ. ವಿಮಾನಗಳ ಟಿಕೆಟ್ ಬೆಲೆಯನ್ನೂ ಕಡಿಮೆ ಮಾಡಿಲ್ಲ. ತೊಂಭತ್ತು ಶೇಕಡಾ ಹಿಂದುಗಳೇ ಇದ್ದರೂ ಹಿಂದುಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಸ್ವಂತ ಹಣದಿಂದ ವಿಮಾನ ಗೊತ್ತುಪಡಿಸಿ ಸಂತ್ರಸ್ತರನ್ನು ಕರೆ ತಂದಿದ್ದೇವೆ ಎಂದ ಸಚಿವ ಸಂತೋಷ್ ಲಾಡ್, ಮೋದಿ ಅಧಿಕಾರಕ್ಕೇರಿದ ಬಳಿಕ ದೇಶದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಪರ ಚರ್ಚೆಗಳೇ ನಡೀತಿಲ್ಲ. ಬರೇ ಹಿಂದು-ಮುಸ್ಲಿಂ ವಿಚಾರಗಳನ್ನೇ ಮಾತನಾಡುವ ಮೂಲಕ ಜನರನ್ನು ಮಂಕು ಮರುಳು ಮಾಡಲಾಗುತ್ತಿದೆ. ಆದರೆ ಮೋದಿಯವರೇ ತಿಳಿದುಕೊಳ್ಳಿ, ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರಾವಧಿಯಲ್ಲಿ ಜನರಿಗಾಗಿ ಕೆಲಸ ಮಾಡಿದರೆ ಅದು ಮಾತ್ರ ಶಾಶ್ವತ ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳಿಗೆ ಗೌರವ ತಂದುಕೊಟ್ಟದ್ದು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಈ ದೇಶದ ಸಂವಿಧಾನ ಮಾತ್ರ. ಬದಲಾಗಿ ಮೋದಿಯಿಂದಾಗಲೀ ಅಥವಾ ಬಿಜೆಪಿಗರಿಂದ ಅಲ್ಲ ಅದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು. ದೇಶದ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ನೇಮಿಸುವಲ್ಲಿಯೂ ಯಾವುದೇ ರೀತಿ-ರಿವಾಜುಗಳಿಲ್ಲ. ಇದರಿಂದಾಗಿಯೇ ಇಂದು ಚುನಾವಣಾ ಆಯೋಗ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿದೆ ಎಂದು ಲಾಡ್ ಆರೋಪಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಮಾತನಾಡಿ, ಮನಮೋಹನ್ ಸಿಂಗ್ ಸರಕಾರ ದೇಶದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಮೋದಿ ಯಾವ ಭರವಸೆಯನ್ನೂ ಈಡೇರಿಸಲ್ಲ ಎಂಬುದು ಶತಸ್ಸಿದ್ದ. ಆರ್ಥಿಕ ಸ್ಥಿತಿಯನ್ನು ಸ್ಥಿರವಾಗಿಟ್ಟುಕೊಂಡು ಮನಮೋಹನ್ ಸಿಂಗ್ ಆಡಳಿತ ನಡೆಸಿದ್ದಾರೆ. ಜಗತ್ತಿನಾದ್ಯಂತ ಆರ್ಥಿಕ ಸ್ಥಿತಿ ಹದಗೆಟ್ಟಿದ್ದಾಗಳಲೂ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ದೇಶದ ಒಂದೇ ಒಂದು ಬ್ಯಾಂಕ್ ಕೂಡಾ ದಿವಾಳಿಯಾಗಿರಲಿಲ್ಲ ಎಂಬುದು ಗಮನಾರ್ಹ ಎಂದು ರೈ ಬೊಟ್ಟು ಮಾಡಿದರು.
ನಾ ಖಾವೂಂಗಾ, ನಾ ಖಾನೇ ದೂಂಗಾ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ನೋಟ್ ಬ್ಯಾನ್, ಕಪ್ಪು ಹಣ ವಾಪಸ್, ಜಿ ಎಸ್ ಟಿ ಮೊದಲಾದ ಸುಳ್ಳುಗಳಿಂದಲೇ ಮೋದಿ ಅಧಿಕಾರಾವಧಿ ಮುಗಿದಿದೆ ಹೊರತು ಜನರಿಗಾಗಿ ಯಾವುದೇ ಕಾರ್ಯಕ್ರಮಗಳೂ ಜಾರಿಗೆ ಬಂದಿಲ್ಲ. ದೇಶದ ವಿವಿಧೆಡೆ ನಡೆದಿರುವ ಮತ ಕಳ್ಳತನ ಪ್ರಕರಣದಂತೆ ಬಂಟ್ವಾಳದ ಅಜ್ಜಿಬೆಟ್ಟು ಬೂತ್ ಸಹಿತ ಕೆಲವೆಡೆ ಇಂತಹ ಪ್ರಕರಣ ನಡೆದಿರುವ ಸಾಧ್ಯತೆ ಇದೆ ಎಂದು ರೈ ಆರೋಪಿಸಿದರು.
ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್, ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್ ಸಹಿತ ಜಿಲ್ಲೆಯ, ಬಂಟ್ವಾಳದ ಹಲವು ಮಂದಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
0 comments:
Post a Comment