ಬಂಟ್ವಾಳ, ಅಕ್ಟೋಬರ್ 11, 2025 (ಕರಾವಳಿ ಟೈಮ್ಸ್) : ಕೆಲಸಕ್ಕೆ ಹೋಗದೆ ಮದ್ಯಪಾನ ಮಾಡಲು ಹಣ ಇಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ ಕಸಬಾ ಗ್ರಾಮದ ರಹಿಮಾನ್ ಪಾಲು ಎಂಬಲ್ಲಿ ಅ 10 ರಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಗಿರಿಯಪ್ಪ ಪೂಜಾರಿ ಎಂದು ಹೆಸರಿಸಲಾಗಿದೆ. ಇವರ ಪತ್ನಿ ಲಲಿತಾ ಅವರು ಹೆಚ್ಚಾಗಿ ಜಕ್ರಿಬೆಟ್ಟುವಿನ ತನ್ನ ತವರು ಮನೆಯಲ್ಲೇ ಇರುತ್ತಿದ್ದು, ಪತಿ ಗಿರಿಯಪ್ಪ ಅವರು ಅಲ್ಲಿಗೆ ಬಂದು ನಿತ್ಯ ಊಟ-ತಿಂಡಿ ಮುಗಿಸಿ ತನ್ನ ಮನೆಗೆ ತೆರಳುತ್ತಿದ್ದರು.
ಪತಿಯ ಮನೆ ಇರುವುದು ಹಳ್ಳಿ ಪ್ರದೇಶವೆಂದು ಆ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿ, ಇದಕ್ಕಾಗಿ ವಗ್ಗದ ವಿಶ್ವನಾಥ ಎಂಬವರು ಗಿರಾಕಿಗಳನ್ನು ಕರೆದುಕೊಂಡು ಬರುತ್ತಿದ್ದರು. ಅಂತೆಯೇ ಅ 10 ರಂದು ವಿಶ್ವನಾಥ ಅವರು ಮನೆ ನೋಡಲು ಗಿರಾಕಿ ಕರೆದುಕೊಂಡು ಬಂದ ಸಂದರ್ಭ ಗಿರಿಯಪ್ಪ ಪೂಜಾರಿ ಅವರು ಮನೆಯ ಅಡಿಗೆ ಕೋಣೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ಪತ್ನಿಗೆ ಮಾಹಿತಿ ನೀಡಿದಂತೆ ಅವರು ತನ್ನ ತಂಗಿ ನಳಿನಿಯೊಂದಿಗೆ ಬಂದು ನೋಡಿ ನೆರೆಮನೆಯಲ್ಲಿ ವಿಚಾರಿಸಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ದೃಢಪಡಿಸಿದ್ದಾರೆ.
ಇವರು ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೇ ಖರ್ಚಿಗೆ ಹಣವನ್ನು ಕೊಡದೇ ವಿಪರೀತ ಮದ್ಯಪಾನ ಮಾಡಿ ಕುಡಿಯಲು ಹಣ ಇಲ್ಲದೇ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment