ಬಂಟ್ವಾಳ, ನವೆಂಬರ್ 09, 2025 (ಕರಾವಳಿ ಟೈಮ್ಸ್) : ಸುಂದರ ಫರಂಗಿಪೇಟೆ ಪರಿಕಲ್ಪನೆ ಜಾರಿಗೆ ತೊಡಕಾಗುವಂತೆ ರಸ್ತೆ ಬದಿಯ ಫುಟ್ ಪಾತ್ ಹಾಗೂ ಚರಂಡಿಗಳನ್ನು ಆಕ್ರಮಿಸಿಕೊಳ್ಳಲಾಗಿದ್ದ ಅನಧಿಕೃತ ಅಂಗಡಿಗಳನ್ನು ಪಂಚಾಯತ್ ಆಡಳಿತ ಇತ್ತೀಚೆಗೆ ಕೈಗೊಂಡಿದ್ದ ನಿರ್ಣಯದಂತೆ ಶನಿವಾರ ತೆರವುಗೊಳಿಸಲಾಗಿದೆ.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಅಭಿವೃದ್ದಿ ಅಧಿಕಾರಿ ಡಾ ಸ್ಮøತಿ ಅವರು ಖುದ್ದು ಸ್ಥಳದಲ್ಲಿ ಹಾಜರಿದ್ದು ಕಾರ್ಯಾಚರಣೆಗೆ ನೇತೃತ್ವ ನೀಡಿದ್ದರು. ಫರಂಗಿಪೇಟೆ ಹೊರಠಾಣಾ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಇತ್ತೀಚೆಗೆ ರಮ್ಲಾನ್ ಮಾರಿಪಳ್ಳ ಅಧ್ಯಕ್ಷತೆಯಲ್ಲಿ ನಡೆದ ನೂತನ ಆಡಳಿತದ ಮೊದಲ ಮಾಸಿಕ ಸಾಮಾನ್ಯ ಸಭೆಯಲ್ಲಿ ಸುಂದರ ಹಾಗೂ ಸ್ವಚ್ಛ ಫರಂಗಿಪೇಟೆ ನಿರ್ಮಿಸುವ ನಿಟ್ಟಿನಲ್ಲಿ ಫುಟ್ ಪಾತ್ ಹಾಗೂ ಚರಂಡಿಗಳನ್ನು ಅತಿಕ್ರಮಿಸಿಕೊಂಡಿರುವ ಅಂಗಡಿ, ಗೂಡಂಗಡಿಗಳನ್ನು ತೆರವುಗೊಳಿಸಲು ಸರ್ವ ಸದಸ್ಯರ ಬೆಂಬಲದೊಂದಿಗೆ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ಪಂಚಾಯತ್ ನಿರ್ಣಯವನ್ನು ಜಾರಿಗೊಳಿಸಲಾಗಿದೆ.
ಫರಂಗಿಪೇಟೆ ಪೇಟೆಯಲ್ಲಿ ಕೆಲವು ಅಂಗಡಿ ಮಾಲಕರು ತಮ್ಮ ಅಂಗಡಿಗಳನ್ನು ಅನಧಿಕೃತವಾಗಿ ವಿಸ್ತರಿಸಿಕೊಂಡಿದ್ದು, ರಸ್ತೆ ಬದಿಗೆ. ಫುಟ್ ಪಾತ್ ಹಾಗೂ ಚರಂಡಿಗಳನ್ನೂ ಅತಿಕ್ರಮಿಸಿಕೊಂಡಿದ್ದ ಪರಿಣಾಮ ಜನ ಇಲ್ಲಿ ನಡೆದಾಡಲೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸ್ಥಳೀಯ ಸಾರ್ವಜನಿಕರು ಹಲವು ಬಾರಿ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಅದರಂತೆ ಇದೀಗ ಪಂಚಾಯತ್ ಆಡಳಿತ ಕ್ರಮ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಪೇಟೆಯಲ್ಲಿ ಬೇಕಾಬಿಟ್ಟಿ ಪಾರ್ಕ್ ಮಾಡುವ ವಾಹನ ಸವಾರರ ವಿರುದ್ದವೂ ಕ್ರಮ ಜರುಗಲಿದೆ ಎಂದು ಪಂಚಾಯತ್ ಅಧ್ಯಕ್ಷರು ತಿಳಿಸಿದ್ದಾರೆ.
ಫರಂಗಿಪೇಟೆ ಪೇಟೆಯನ್ನು ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಇಂಟರ್ ಲಾಕ್ ಅಳವಡಿಸಿ ಸೂಕ್ತ ಫುಟ್ ಪಾತ್ ವ್ಯವಸ್ಥೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಈ ಬಗ್ಗೆ ಈಗಾಗಲೇ ಜಿ ಪಂ ಮಾಜಿ ಸದಸ್ಯರಾಗಿರುವ ಉಮ್ಮರ್ ಫಾರೂಕ್ ಫರಂಗಿಪೇಟೆ ಅವರ ನೇತೃತ್ವದಲ್ಲಿ ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ.













0 comments:
Post a Comment