ಮಂಗಳೂರು, ನವೆಂಬರ್ 15, 2025 (ಕರಾವಳಿ ಟೈಮ್ಸ್) : ದನವೊಂದು ರಸ್ತೆ ದಾಟುತ್ತಿರುವುದನ್ನು ನೋಡಿ ಗ್ಯಾಸ್ ಟ್ಯಾಂಕರ್ ಚಾಲಕ ಟ್ಯಾಂಕರ್ ನಿಲ್ಲಿಸಿದ್ದ ವೇಳೆ ಹಿಂದಿನಿಂದ ಬಂದ ಇನ್ನೊಂದು ಟ್ಯಾಂಕರ್ ಎದುರಿನಲ್ಲಿದ್ದ ಇನ್ನೋವಾ ಕಾರು ಹಾಗೂ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾದಲ್ಲಿದ್ದ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಪಣಂಬೂರು ಜಂಕ್ಷನ್ನಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ಅಟೋ ರಿಕ್ಷಾ ಚಾಲಕ ಉಳ್ಳಾಲ ನಿವಾಸಿ ಮುಹಮ್ಮದ್ ಕುಂಞÂ (25), ಪ್ರಯಾಣಿಕರಾದ ಕೊಣಾಜೆ-ಮೊಂಟೆಪದವು ನಿವಾಸಿಗಳಾದ ಅಬೂಬಕ್ಕರ್ (65) ಹಾಗೂ ಇಬ್ರಾಹಿಂ (68) ಎಂದು ಹೆಸರಿಸಲಾಗಿದೆ. ಇನ್ನೋವಾ ಕಾರು ಪ್ರಯಾಣಿಕ ಆನಂದ ಸನಿಲ್ ಅವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ನಡೆಸಿದ ಟ್ಯಾಂಕರ್ ಚಾಲಕ ಮುಹಮ್ಮದ್ ಶೈಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 15 ರಂದು ಬೆಳಿಗ್ಗೆ ಸುಮಾರು 11.15ಕ್ಕೆ ಪಣಂಬೂರು ಜಂಕ್ಷನ್ನಿನಲ್ಲಿ ದನವೊಂದು ರಸ್ತೆ ದಾಟುತ್ತಿರುವುದನ್ನು ನೋಡಿ ಮೊದಲಿಗೆ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರನ್ನು ಚಾಲಕ ನಿಲ್ಲಿಸಿದ್ದಾನೆ. ಅದರ ಹಿಂದೆ ಬರುತ್ತಿದ್ದ ಆಟೋ ರಿಕ್ಷಾ ನಿಲ್ಲಿಸಿದಾಗ ಅದರ ಹಿಂದೆ ಇದ್ದಂತಹ ಇನ್ನೋವಾ ಕಾರು ಚಾಲಕ ಕೂಡ ನಿಲ್ಲಿಸಿದ್ದಾನೆ. ಇದೇ ಸಂದರ್ಭ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ವೇಗವಾಗಿ ಬಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರು ಎಡಗಡೆಗೆ ಹೋಗಿದೆ. ಅದೇ ಸಮಯ ಅಲ್ಲಿದ್ದ ಆಟೋ ರಿಕ್ಷಾ ಎರಡು ಟ್ಯಾಂಕರುಗಳ ಮಧ್ಯೆ ಸಿಲುಕಿಕೊಂಡು ಅಪ್ಪಚ್ಚಿಯಾಗಿದೆ.














0 comments:
Post a Comment