ಬಂಟ್ವಾಳ, ಡಿಸೆಂಬರ್ 19, 2025 (ಕರಾವಳಿ ಟೈಮ್ಸ್) : ಯಾವುದೇ ರೋಗಗಳಿರಲಿ ಅವುಗಳು ಬಂದಾಗ ನಿವಾರಿಸಿಕೊಳ್ಳುವುದಕ್ಕಿಂತ ಬರದಂತೆ ಜಾಗೃತಿ ವಹಿಸುವುದು ಅತ್ಯಂತ ಅವಶ್ಯಕವಾದುದು. ಇಂದು ಏಡ್ಸ್ ನಂತಹ ರೋಗಗಳು ಹೆಚ್ಚು ಹರಡುತ್ತಿರುವುದು ಸ್ವಯಂಕೃತ ತಪ್ಪುಗಳಿಂದಲೇ ಹೆಚ್ಚು. ನಗರ ಪ್ರದೇಶದ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನತೆ ಮಾದಕ ವಸ್ತುಗಳಿಗೆ ಆಕರ್ಷಿತರಾಗುವುದು ಹೆಚ್ಚಾಗುತ್ತಿದ್ದು, ಇದು ಏಡ್ಸ್ ಹರಡಲು ಪ್ರಮುಖ ಕಾರಣಗಳಲ್ಲೊಂದು ಎಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಜಯರಾಮ್ ಪೂಜಾರಿ ಹೇಳಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಎನ್ನೆಸ್ಸೆಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ಜಾಗೃತಿ ದಿನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ ಮಾತನಾಡಿ, ಓದಿನೊಂದಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಪಡೆದ ಪ್ರಯೋಜನವನ್ನು ಸಮಾಜದ ಇತರರಿಗೂ ತಿಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಸ್ವಾಗತಿಸಿ, ಆರ್ ಆರ್ ಸಿ ಸಂಯೋಜಕ ಸುಪ್ರೀತ್ ಕಡಕೋಳ್ ವಂದಿಸಿದರು. ಶ್ರೀಮತಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಏಡ್ಸ್ ಜಾಗೃತಿ ಕುರಿತಾದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.















0 comments:
Post a Comment