ಬಂಟ್ವಾಳ, ಡಿಸೆಂಬರ್ 23, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ತಾಲೂಕಾಡಳಿತ ಕಚೇರಿಯ ಮುಂಭಾಗದಲ್ಲಿ ಪುರಸಭೆ ವತಿಯಿಂದ ಮಹಿಳೆಯರಿಗಾಗಿ ನಿರ್ಮಾಣಗೊಂಡಿರುವ ಪಿಂಕ್ ಶೌಚಾಲಯ ಮತ್ತೆ ಕಾರ್ಯಾರಂಭಗೊಂಡಿದ್ದು, ಮಹಿಳೆಯರಿಗೆ ಸುಸಜ್ಜಿತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ವರ್ಷದ ಹಿಂದೆ ಪುರಸಭೆ ವತಿಯಿಂದ ಬಿ ಸಿ ರೋಡು ಮಿನಿ ವಿಧಾನಸೌಧ ಪಕ್ಕದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಈ ಪಿಂಕ್ ಶೌಚಾಲಯ ನಿರ್ಮಾಣಗೊಂಡು ಕಾರ್ಯಾರಂಭ ಮಾಡಿತ್ತಾದರೂ ಕೆಲವೇ ದಿನಗಳಲ್ಲಿ ಅದು ಬಂದ್ ಆಗಿತ್ತು. ಆಡಳಿತ ಸೌಧದ ಮುಂಭಾಗದಲ್ಲೇ ಈ ಶೌಚಾಲಯ ಇರುವುದರಿಂದ ಮಹಿಳೆಯರು ಇದನ್ನು ಉಪಯೋಗಿಸಲು ಹಿಂದೇಟು ಹಾಕಿದ ಪರಿಣಾಮ ಇಂತಹ ಕೆಲವೊಂದು ಕಾರಣಗಳಿಂದ ಈ ಶೌಚಾಲಯ ಕಾರ್ಯನಿರ್ವಹಣೆ ಸ್ಥಗಿತಗೊಂಡು ನಿರುಪಯುಕ್ತವಾಗುವ ಸಾಧ್ಯತೆ ಇತ್ತು. ಬಿ ಸಿ ರೋಡಿನ ಮಿನಿ ವಿಧಾನಸೌಧ ಸಹಿತ ಎಲ್ಲೆಡೆ ಶೌಚಾಲುಯ ಸಮಸ್ಯೆ ಮೇರೆ ಮೀರಿರುವುದರಿಂದ ಮಹಿಳೆಯರಿಗಾಗಿಯೇ ಇರುವ ಈ ಶೌಚಾಲಯವನ್ನು ಸುಸಜ್ಜಿತವಾಗಿ ಪುನರಾರಂಭಿಸುವಂತೆ ಜನರ ಆಗ್ರಹದ ಬಗ್ಗೆ ಈ ಹಿಂದೆ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
ಇದೀಗ ಈ ಪಿಂಕ್ ಶೌಚಾಲಯ ಸುಸಜ್ಜಿತವಾಗಿ ಮತ್ತೆ ಕಾರ್ಯನಿರ್ವಹಣೆ ಆರಂಭಿಸಿದೆ. ಶೌಚಾಲಯದ ಜೊತೆಗೆ ಇಲ್ಲಿನ ಮಹಿಳೆಯರ ಸುಸಜ್ಜಿತ ವಿಶ್ರಾಂತಿ ಕೊಠಡಿಯೂ ಇದ್ದು, ಅದರಲ್ಲಿ ಶಿಶುಗಳನ್ನು ಲಾಲಿಸಲು ಸೂಕ್ತವಾದ ತೊಟ್ಟಿಲಿನ ವ್ಯವಸ್ಥೆಯೂ ಹೊಂದಿದೆ. ಪಟ್ಟಣಕ್ಕೆ ವಿವಿಧ ಕೆಲಸ-ಕಾರ್ಯಗಳಿಗೆ ಬರುವ ಸಣ್ಣ ಮಕ್ಕಳಿರುವ ಮಹಿಳೆಯರಿಗೆ ಈ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಎಲ್ಲ ರೀತಿಯಲ್ಲೂ ಅನುಕೂಲಕರ ಸನ್ನಿವೇಶವನ್ನು ನಿರ್ಮಿಸಿದೆ. ಈ ಶೌಚಾಲಯ ಮಹಿಳೆಯರಿಗಾಗಿಯೇ ಇದ್ದು ಸಂಪೂರ್ಣ ಉಚಿತವಾಗಿರುತ್ತದೆ. ಇದರ ಶುಚಿತ್ವ ನಿರ್ವಹಣೆ ಹಾಗೂ ಮಹಿಳೆಯರ ಸಹಾಯಕ್ಕಾಗಿ ಪುರಸಭಾ ಪೌರ ಕಾರ್ಮಿಕ ಮಹಿಳಾ ಸಿಬ್ಬಂದಿಯೂ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ ಸಿ ರೋಡಿನಲ್ಲಿ ಬಂಟ್ವಾಳ ಪುರಸಭೆ ವತಿಯಿಂದ ಮಹಿಳೆಯರಿಗಾಗಿಯೇ ನಿರ್ಮಾಣವಾಗಿರುವ ಈ ಪಿಂಕ್ ಶೌಚಾಲಯ ಜಿಲ್ಲೆಯಲ್ಲೇ ಮಾದರಿಯಾಗಿ ಗುರುತಿಸಿಕೊಂಡಿದೆ.
















0 comments:
Post a Comment