ಬಂಟ್ವಾಳ, ಡಿಸೆಂಬರ್ 23, 2025 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಅವರು ವೀಕ್ಷಿಸಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಸಜಿಪಮುನ್ನೂರು, ಸಜಿಪಮೂಡ, ಮಂಚಿ, ವೀರಕಂಭ, ಬೋಳಂತೂರು ಗ್ರಾಮಗಳು ಬಿಟ್ಟು ಹೋಗಿತ್ತು. ಈ 5 ಗ್ರಾಮಗಳಿಗೂ ನೀರೊದಗಿಸುವ ಮಹತ್ವಾಕಾಂಕ್ಷೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಉಳ್ಳಾಲ ಯೋಜನೆಗೆ ರೂಪಿಸಿದ ಟ್ರೀಟ್ ಮೆಂಟ್ ಪ್ಲಾಂಟ್ ಮೂಲಕ ನೀರನ್ನು ಪೂರೈಕೆ ಮಾಡುವಂತೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ವಿಶೇಷ ಶಿಫಾರಸ್ಸಿನ ಹಿನ್ನಲೆಯಲ್ಲಿ ಈ ಯೋಜನೆ ಕಾರ್ಯಗತಗೊಂಡು ಇದೀಗ ಕಾಮಗಾರಿ ಪೂರ್ಣಗೊಂಡಿದೆ. ಈ ಮೂಲಕ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಟ್ರೀಟ್ ಮೆಂಟ್ ಪ್ಲಾಂಟ್ ಮೂಲಕ ಶುದ್ಧೀಕರಿಸಿದ ಕುಡಿಯುವ ನೀರು ತಲುಪುವಂತಾಗಿದೆ.
ನದಿ ನೀರನ್ನು ಮೂಲವಾಗಿರಿಸಿಕೊಂಡು ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮದ ಜನರಿಗೆ ಶಾಶ್ವತವಾಗಿ ನೀರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ಪ್ರಮುಖ ಕನಸಾಗಿತ್ತು. ಆದರೆ ಕಾರಣಾಂತರಗಳಿಗೆ 5 ಗ್ರಾಮಗಳು ಈ ಯೋಜನೆಯ ಸೌಲಭ್ಯದಿಂದ ವಂಚಿತವಾಗಿ ಉಳಿದಿತ್ತು. ಈ ಗ್ರಾಮಗಳಿಗೂ ನೀರೋದಗಿಸುವ ನಿಟ್ಟಿನಲ್ಲಿ ರೈ ಅವರ ವಿಶೇಷ ಶಿಪಾರಸ್ಸು, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಸಜಿಪಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ಅವರುಗಳ ಸತತ ಪ್ರಯತ್ನದ ಫಲವಾಗಿ ಗ್ರಾಮೀಣ ನೀರು ಸರಬರಾಜು ಮಂಡಳಿಯ ಮೂಲಕ ಈ ಯೋಜನೆ ಅನುಷ್ಠಾನಗೊಂಡಿದೆ.
ಉಳ್ಳಾಲ ಯೋಜನೆಯ ಮೂಲಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಳ್ಳಾಲ ತಾಲೂಕಿಗೆ ಕುಡಿಯುವ ನೀರಿನ ಪೂರೈಕೆಗೆ ಸಜಿಪಮುನ್ನೂರು ಗ್ರಾಮದ ನದಿ ಕಿನಾರೆಯಲ್ಲಿ ಪ್ಲಾಂಟ್ ನಿರ್ಮಿಸಿ ಯೋಜನೆ ರೂಪಿಸಿದಾಗ ರಮಾನಾಥ ರೈ ಅವರು ಬಹುಗ್ರಾಮ ಕುಡಿಯುವ ನೀರಿನ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿ ಬಾಕಿ ಉಳಿದ ಈ 5 ಗ್ರಾಮಗಳಿಗೂ ನೀರೊದಗಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಈ ಯೋಜನೆ ಇದೀಗ ಯಶಸ್ಬಿಯಾಗಿ ಕಾರ್ಯಗತಗೊಂಡಿದೆ.
ಕಾಮಗಾರಿ ಪ್ರಗತಿ ವೀಕ್ಷಣೆ ವೇಳೆ ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಜಿಪ ಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ ಶರೀಫ್ ನಂದಾವರ, ಪಂಚಾಯತ್ ಸದಸ್ಯರಾದ ಶಮೀರ್ ನಂದಾವರ, ಇಸ್ಮಾಯಿಲ್ ನಂದಾವರ, ಪ್ರಮುಖರಾದ ಬಶೀರ್ ನಂದಾವರ, ಅಬ್ಬಾಸ್, ಮೋನು ಯಾನೆ ರಂಶಾದ್, ಆರೀಫ್ ನಂದಾವರ ಮೊದಲಾದವರು ಜೊತೆಗಿದ್ದರು.














0 comments:
Post a Comment