ಮಂಗಳೂರು, ಡಿಸೆಂಬರ್ 06, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬಂಧಿಸಿದ ನಗರ ಸಿಸಿಬಿ ಪೊಲೀಸರು 50 ಲಕ್ಷ ರೂಪಾಯಿ ಮೌಲ್ಯದ ಸುಮಾರು 517.76 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಬೈಂದೂರು ತಾಲೂಕು, ಕುಂದಾಪುರ, ನಾವುಂದ ಗ್ರಾಮದ ಮೊಹಮ್ಮದ್ ಶಿಯಾಬ್ ಅಲಿಯಾಸ್ ಶಿಯಾಬ್, ಉಳ್ಳಾಲ ತಾಲೂಕು, ನರಿಂಗಾನ ಗ್ರಾಮದ ಮೊಹಮ್ಮದ್ ನೌಶಾದ್ ಅಲಿಯಾಸ್ ನೌಶಾದ್, ಮಂಗಳೂರು-ಕಸಬಾ ಬೆಂಗ್ರೆ ನಿವಾಸಿ ಇಮ್ರಾನ್ ಅಲಿಯಾಸ್ ಇಂಬ ಹಾಗೂ ಬಂಟ್ವಾಳ ತಾಲೂಕು, ಬ್ರಹ್ಮರಕೂಟ್ಲು ನಿವಾಸಿ ನಿಸಾರ್ ಅಹ್ಮದ್ ಅಲಿಯಾಸ್ ನಿಸಾರ್ ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ್ ಅವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ತಂಡವು ಖಚಿತ ಮಾಹಿತಿ ಮೇರೆಗೆ ಡಿಸೆಂಬರ್ 6 ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೆÇಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಬಳಿ ಕಾರಿನಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಬಳಿ ಇದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ 517.76 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ರೂಪಾಯಿ ಮೌಲ್ಯದ ನೀಲಿ ಬಣ್ಣದ ಮಾರುತಿ ಕಂಪೆನಿಯ ಫ್ರಾಂಕ್ಸ್ ಮಾದರಿಯ ಕೆಎ70 ಎಂ7115 ನೋಂದಣಿ ಸಂಖ್ಯೆಯ ಕಾರು, 5 ಮೊಬೈಲ್ ಪೆÇೀನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಬೆಂಗಳೂರಿನಿಂದ ನೈಜೀರಿಯಾ ದೇಶದ ವ್ಯಕ್ತಿಯಂದ ಮಾದಕ ವಸ್ತುಗಳನ್ನು ಆರೋಪಿಗಳು ತಂದು ಮಂಗಳೂರು ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿದೆ. ಸದ್ರಿ ಆರೋಪಿತರ ವಿರುದ್ದ ಮುಲ್ಕಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2025 ಕಲಂ22(ಸಿ), 21(ಸಿ) ಎನ್.ಡಿ.ಪಿ.ಎಸ್. ಕಾಯ್ದೆ ಜೊತೆಗೆ 3(5) ಬಿ.ಎನ್.ಎಸ್. ಪ್ರಕಾರ ಪ್ರಕರಣ ದಾಖಲಾಗಿದೆ.
ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡರೆ ಜೀವನ ಮುಗಿದಂತೆ : ಕಮಿಷನರ್ ಎಚ್ಚರಿಕೆ
ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡರೆ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಜಾಮೀನು ಪಡೆದು ಹೊರಗೆ ಬರಬಹುದು ಎಂದುಕೊಂಡರೆ ಅದು ತಪ್ಪು ಕಲ್ಪನೆ. ಈ ಪ್ರಕರಣದಡಿ ಕನಿಷ್ಠ 12 ವರ್ಷಗಳಿಂದ ಗರಿಷ್ಠ 15 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೆ 2022ರಲ್ಲಿ ನಡೆದ ಎನ್ ಡಿ ಪಿ ಎಸ್ ಕಾಯ್ದೆ ಪ್ರಕರಣದಲ್ಲಿ 5 ಜನರಿಗೆ ಶಿಕ್ಷೆ ವಿಧಿಸಿ ಪಿಡಿಜೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇಂತಹ ಪ್ರಕರಣಗಳಲ್ಲಿ ತಳುಕು ಹಾಕಿಕೊಂಡರೆ ಜೀವನ ಮುಗಿದಂತೆ. ಈ ಕಾರಣಕ್ಕಾಗಿ ಈ ಡ್ರಗ್ಸ್ ಮಾರಾಟ-ಸಾಗಾಟ ಪ್ರಕರಣಗಳಲ್ಲಿ ಯಾರೂ ಭಾಗಿಯಾಗದಂತೆ ಎಚ್ಚರ ವಹಿಸಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.

















0 comments:
Post a Comment