ಬಂಟ್ವಾಳ, ಡಿಸೆಂಬರ್ 27, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕರ ಸೂಚನೆ ಮೇರೆಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಅಯೋಗ್ಯವಾಗುವ ರೀತಿಯಲ್ಲಿ ಹೊಂಡ-ಗುಂಡಿಗಳು ಬಿದ್ದಿದ್ದ ವಿವಿಧ ರಸ್ತೆಗಳಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಪ್ಯಾಚ್ ವರ್ಕ್ ಕಾಮಗಾರಿ ಕೈಗೊಳ್ಳಲಾಗಿದೆ.
ಕಳೆದ ಹಲವು ಸಮಯಗಳಿಂದ ವಾಹನ ಹಾಗೂ ಜನ ಸಂಚಾರಕ್ಕೆ ತೊಡಕಾಗಿದ್ದ ಪಾಣೆಮಂಗಳೂರು, ಆಲಡ್ಕ, ಗೂಡಿನಬಳಿ, ಬಂಟ್ವಾಳ, ಕೆಳಗಿನಪೇಟೆ, ಜಕ್ರಿಬೆಟ್ಟು, ನೆರೆ ವಿಮೋಚನಾ ರಸ್ತೆ, ಕಾರಾಜೆ, ಬೊಳ್ಳಾಯಿ, ಕುಕ್ಕಾಜೆ, ಮಂಚಿ, ಸಾಲೆತ್ತೂರು, ಮಾರ್ನಬೈಲು, ಕಂದೂರು, ಪೊಳಲಿ ಮೊದಲಾದ ರಸ್ತೆಗಳಿಗೆ ಶಾಸಕರ ಸೂಚನೆ ಮೇರೆಗೆ ಡಾಮರೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖಾಧಿಕಾರಿಗಳು ಕೈಗೊಂಡಿದ್ದಾರೆ.
ಪಾಣೆಮಂಗಳೂರು ಪೇಟೆ ಭಾಗಕ್ಕೆ ಈ ಹಿಂದೆಯೇ ಡಾಮರೀಕರಣ ಪ್ರಕ್ರಿಯೆ ನಡೆದಿದ್ದು, ಆಲಡ್ಕ-ಬಂಗ್ಲೆಗುಡ್ಡೆ ಕ್ರಾಸಿನಿಂದ ಮೆಲ್ಕಾರ್ ಕ್ರಾಸ್ ವರೆಗೆ ಡಾಮರೀಕರಣ ಬಾಕಿ ಇತ್ತು. ಈ ಭಾಗದಲ್ಲಿ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿ ವಾಹನ ಸಂಚಾರ ತೀರಾ ದುಸ್ತರವಾಗಿತ್ತು. ಇಲ್ಲಿನ ರಸ್ತೆಗೆ ಡಾಮರೀಕರಣಕ್ಕಾಗಿ ಸ್ಥಳೀಯರು ಹಲವು ಬಾರಿ ಪಿಡಬ್ಲ್ಯುಡಿ ಇಲಾಖಾಧಿಕಾರಿಗಳಲ್ಲಿ ಆಗ್ರಹಿಸಿದ್ದರು. ಪೂರ್ಣ ಡಾಮರೀಕರಣಕ್ಕೆ ಸಾಕಷ್ಟು ಅನುದಾನದ ಕೊರತೆ ಇರುವುದರಿಂದ ತಾತ್ಕಾಲಿಕ ಪ್ಯಾಚ್ ವರ್ಕ್ ನಡೆಸಿ ವಾಹನ ಸಂಚಾರಕ್ಕೆ ಯೋಗ್ಯವಾಗಿಸುವ ನಿಟ್ಟಿನಲ್ಲಿ ಕಳೆದ ಮಳೆಗಾಲಕ್ಕಿಂತ ಮುಂಚಿತವಾಗಿ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಲು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಈ ಸಂದರ್ಭ ಕಾಮಗಾರಿಗೆ ಅಡ್ಡಿಪಡಿಸಿದ್ದ ಸ್ಥಳೀಯ ಪುರಸಭಾ ಸದಸ್ಯರು ಹಾಗೂ ಕೆಲವು ಮಂದಿ ಪೂರ್ಣ ಡಾಮರೀಕರಣವೇ ನಡೆಸುವಂತೆ ತಾಕೀತು ಮಾಡಿ ಕಾಮಗಾರಿಗೆ ಬಂದಿದ್ದವರನ್ನು ವಾಪಾಸು ಕಳಿಸಿದ್ದರು. ಇದರಿಂದ ತೇಪೆ ಕಾಮಗಾರಿಯೂ ಅಲ್ಲಿಗೇ ಬಾಕಿಯಾಗಿ ಮಳೆಗಾಲ ಪೂರ್ತಿ ರಸ್ತೆ ಅವ್ಯವಸ್ಥೆಯಿಂದಾಗಿ ಸ್ಥಳೀಯರು ತೀವ್ರ ಬವಣೆ ಅನುಭವಿಸಿದ್ದರು.
ಬಳಿಕ ಮಳೆಗಾಲ ಮುಗಿದ ತಕ್ಷಣ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದ ಹಿನ್ನಲೆಯಲ್ಲಿ ತಾತ್ಕಾಲಿಕ ಪ್ಯಾಚ್ ವರ್ಕ್ ಮಾಡಿ ರಸ್ತೆಗಳನ್ನು ಸಂಚಾರ ಯೋಗ್ಯಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮುಂದಿನ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಪಾಣೆಮಂಗಳೂರು ಸಹಿತ ಅಗತ್ಯವಿರುವ ಕಡೆಗಳಿಗೆ ಪೂರ್ಣ ಡಾಮರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದಾರೆ.























0 comments:
Post a Comment