ಮಂಗಳೂರು, ಜನವರಿ 09, 2026 (ಕರಾವಳಿ ಟೈಮ್ಸ್) : ಮುಂಬರುವ ಫೆಬ್ರವರಿ ತಿಂಗಳಲ್ಲಿ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಗೇರು ಮೇಳ ಆಯೋಜಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಜ 9 ರಂದು ನಗರದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಧಿಕ ಗೇರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿ ಗೇರು ಸಸಿಗಳಿಗೆ ಹೆಚ್ಚು ಬೇಡಿಕೆ ಇರುವ ಬಗ್ಗೆ ತಿಳಿದು ಬಂದಿದೆ. ಗೇರು ಉತ್ಪನ್ನಗಳಿಗೆ ದೇಶದಲ್ಲಿಯೂ ಹಾಗೂ ವಿದೇಶದಲ್ಲಿಯೂ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆಯಷ್ಟು ಗೇರು ಪೂರೈಕೆ ಇಲ್ಲದೆ ವಿದೇಶದಿಂದ ಗೇರು ಆಮದು ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.
ಕರಾವಳಿ ಗೇರು ಬೆಳೆಗಾರರನ್ನು ಪೆÇ್ರೀತ್ಸಾಹಿಸಲು ಮಂಗಳೂರಿನಲ್ಲಿ ಗೇರು ಮೇಳವನ್ನು ಆಯೋಜಿಸಲಾಗುತ್ತಿದೆ. ಇದರಿಂದ ಗೇರು ಬೆಳೆಗಾರರು, ಗೇರು ಉದ್ಯಮದವರನ್ನು ಒಂದೆಡೆ ಸೇರಿಸಿ ಗೇರು ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಲು ಪ್ರಯತ್ನಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಗೇರು ಮೇಳದಲ್ಲಿ ಉತ್ಪನ್ನಗಳ ಪ್ರದರ್ಶನ, ವಿಚಾರ ಸಂಕಿರಣ ಸೇರಿದಂತೆ ವಿವಿಧ ಆಯಾಮಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದ ಈಶ್ವರ್ ಖಂಡ್ರೆ ಗೇರು ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ದೊರಕುವಂತಾಗಲು ಇಲಾಖೆಯು ಕ್ರಮ ಕೈಗೊಳ್ಳಲಿದೆ. ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು ಬೇಕಾದ ಎಲ್ಲಾ ರೀತಿಯ ಸಂಶೋಧನೆ, ಬೆಲೆ ವಿಸ್ತರಣೆ ಮತ್ತಿತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 40 ಸಾವಿರ ಮೆಟ್ರಿಕ್ ಟನ್ ಗೇರು ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ ಗೇರು ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದ್ದು, ಗೇರು ಉದ್ಯಮದಿಂದಲೂ ಬೇಡಿಕೆ ಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗೇರು ಸಸಿಗಳಿಗೂ ಹೆಚ್ಚಿನ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ನಿಗಮವು ಇದಕ್ಕೆ ಬೇಕಾದ ಯೋಜನೆ ರೂಪಿಸಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ಮೇಗಿ, ಸಿಸಿಎಫ್ ಕರಿಕಲನ್, ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಮಾಜಿ ಸಚಿವ ರಮಾನಾಥ ರೈ ಮೊದಲಾದವರು ಜೊತೆಗಿದ್ದರು.






















0 comments:
Post a Comment