ಮಂಗಳೂರು, ಜನವರಿ 28, 2026 (ಕರಾವಳಿ ಟೈಮ್ಸ್) : ಯಾರೂ ವಾಸವಿರದೆ ಕೇವಲ ಪೂಜಾ ಕಾರ್ಯಕ್ಕೆ ಬಳಸುತ್ತಿದ್ದ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಪೂಜಾ ಪರಿಕರಗಳನ್ನು ಕಳವುಗೈದಿದ್ದ ಪ್ರಕರಣ ಬೇಧಿಸಿದ ಸುರತ್ಕಲ್ ಪೊಲೀಸರು ಕಳವುಗೈದ ಸೊತ್ತುಗಳ ಸಹಿತ ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಲತಃ ಬಜಪೆ-ಕೊಂಚಾರ್, ಬದ್ರಿಯಾ ನಗರ ಮುನಾಫ್ ಮಂಝಿಲ್ ನಿವಾಸಿ, ಪ್ರಸ್ತುತ ಸುರತ್ಕಲ್-ಚೊಕ್ಕಬೆಟ್ಟು ಮಲ್ಲಮಾರ್ ರೋಡ್ ಝೀಹಾ ಅಪಾರ್ಟ್ ಮೆಂಟ್ 2ನೇ ಮಹಡಿಯಲ್ಲಿ ವಾಸವಾಗಿರುವ ಜಾಫರ್ ಖಾನ್ ಎಂಬವರ ಪುತ್ರ ವಾಜೀದ್ ಜೆ ಅಲಿಯಾಸ್ ವಾಜಿ (27) ಹಾಗೂ ಮೂಲತಃ ಬೆಳ್ತಂಗಡಿ ತಾಲೂಕು, ತೆಂಕಕಾರಂದೂರು ಕಟ್ಟೆ ಮಸೀದಿ ಬಳಿ ನಿವಾಸಿ, ಪ್ರಸ್ತುತ ಮಂಗಳೂರು-ಜೋಕಟ್ಟೆ ಕೆ ಬಿ ಎಸ್ ರೈಲ್ವೇ ಗೇಟ್ ಬಳಿಯ ಶರೀಫ್ ಅವರ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವ ಕೆ ವೀರನ್ ಕುಟ್ಟಿ ಎಂಬವರ ಪುತ್ರ ಸಯ್ಯದ್ ಆಲಿ (40) ಎಂದು ಹೆಸರಿಸಲಾಗಿದೆ.
ಕುಳಾಯಿ ಗ್ರಾಮದ ಯಶೋಧ ಕ್ಲಿನಿಕ್ ಹತ್ತಿರದ ನಿವಾಸಿ ಸುರೇಶ್ ಅವರ ಪತ್ನಿ ಶ್ರೀಮತಿ ಅಮಿತಾ (43) ಅವರ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇದ್ದು, ಆ ಮನೆಯಲ್ಲಿ ಯಾರೂ ವಾಸವಿರದೆ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕುತ್ತಿದ್ದರು. ಕಳೆದ ಡಿಸೆಂಬರ್ 26 ರಂದು ರಾತ್ರಿ ವೇಳೆ ಅಪರಿಚಿತರು ಮನೆಯ ಮೇಲ್ಚಾವಣಿಯ ಹಂಚು ತೆಗೆದು ಒಳಗೆ ಪ್ರವೇಶಿಸಿ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಪಸಪ್ಪ ದೈವದ ತಾಮ್ರದ ಮೂರ್ತಿ, ಮಂತ್ರ ದೇವತೆಯ ಬೆಳ್ಳಿಯ ಮೂರ್ತಿ, ಕಲ್ಲುರ್ಟಿ ಪಂಜುರ್ಲಿ ದೈವದ ತಾಮ್ರದ ಮೂರ್ತಿ, ಬೆಳ್ಳಿಯ ಕಡ್ಸಲೆ (ಖಡ್ಗ), 2 ತಾಮ್ರದ ಘಂಟೆ, 4 ತಾಮ್ರದ ಚೆಂಬು, ಹಾಗೂ ಎಲ್.ಇ.ಡಿ ಟಿ.ವಿ ಕಳವು ಮಾಡಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಕೈಗೆತ್ತಿಕೊಂಡ ಸುರತ್ಕಲ್ ಪೆÇಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು, ತಾಂತ್ರಿಕ ವಿಧಾನಗಳನ್ನು ಪರಿಶೀಲನೆ ನಡೆಸಿ ಆರೋಪಿ ವಾಜೀದ್ ಜೆ ಅಲಿಯಾಸ್ ವಾಜಿ ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದಾರೆ. ಆತ ಕಳವು ಕೃತ್ಯ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿಯಂತೆ ಮನೆ ಕಳ್ಳತನ ಮಾಡಿದ ಮಾಲಿನಲ್ಲಿ ಹಿತ್ತಾಳೆ ಹಾಗೂ ತಾಮ್ರದ ಸಾಮಾಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದಂತೆ ಜನವರಿ 27 ರಂದು ಸಯ್ಯದ್ ಆಲಿ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳಿಂದ ಕಳ್ಳತನವಾದ ಸುಮಾರು 1.95 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ಮಂತ್ರ ದೇವತೆಯ ಮೂರ್ತಿ, ಕೊಡೆ, ಕಡ್ಸಲೆ, ಸುಮಾರು 2,750/- ರೂಪಾಯಿ ಮೌಲ್ಯದ ಹಿತ್ತಾಳೆ ಪೂಜಾ ಸಾಮಾಗ್ರಿ, ಸುಮಾರು 300/- ರೂಪಾಯಿ ಮೌಲ್ಯದ ತಾಮ್ರದ ಪೂಜಾ ಸಾಮಾಗ್ರಿ, ಸುಮಾರು 2 ಸಾವಿರ ರೂಪಾಯಿ ಮೌಲ್ಯದ ಟಿ.ವಿ ಹಾಗೂ ಸೆಟಪ್ ಬಾಕ್ಸ್, 2 ಮೊಬೈಲ್ ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಸ್ಕೂಟರ್ ಮಹಜರು ಮುಖೇನ ಸ್ವಾಧೀನ ಪಡೆಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿ ವಾಜೀದ್ ಜೆ ಅಲಿಯಾಸ್ ವಾಜಿ ಎಂಬಾತನ ಮೇಲೆ ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಹಾಳೆ ಹಾಗೂ ಎಂಓಬಿ ತೆರೆಯಲಾಗಿದ್ದು ಈತನ ಮೇಲೆ ಮಂಗಳೂರು ನಗರ, ಉಡುಪಿ, ಉತ್ತರ ಕನ್ನಡ, ಹಾಸನ ಜಿಲ್ಲೆಗಳಾದ್ಯಂತ 1 ಕೊಲೆ ಯತ್ನ, 2 ದರೋಡೆ, 3 ದನ ಕಳ್ಳತನ, 6 ಮನೆ ಕಳ್ಳತನ, 3 ವಾಹನ ಕಳ್ಳತನ, 1 ಇತರ ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿದೆ.
ಬಂಧಿತರನ್ನು ಜನವರಿ 28 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.














0 comments:
Post a Comment