ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಿ : ಸಂಘಟನೆಗಳ ಒತ್ತಾಯ - Karavali Times ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಿ : ಸಂಘಟನೆಗಳ ಒತ್ತಾಯ - Karavali Times

728x90

18 August 2020

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಿ : ಸಂಘಟನೆಗಳ ಒತ್ತಾಯ

 




ಬಂಟ್ವಾಳ (ಕರಾವಳಿ ಟೈಮ್ಸ್) : ಬಡ ಮಹಿಳೆಯರ ರಕ್ತ ಹೀರುವ ವಸೂಲಿಕೋರ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯವನ್ನು ನಿಲ್ಲಿಸಲು ಕೇಂದ್ರ, ರಾಜ್ಯ ಸರಕಾರಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ  ಹೋರಾಟ ಸಮಿತಿ, ಸಿಐಟಿಯು ಬಂಟ್ವಾಳ ತಾಲೂಕು ಸಮಿತಿ, ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡ ಮಹಿಳೆಯರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವ ಉದ್ಯೋಗ ನೀಡುವ ಹೆಸರಿನಲ್ಲಿ ಪ್ರಾರಂಬಿಸಿದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದು ಮಹಿಳೆಯರನ್ನು ಅಧಿಕ ಪ್ರಮಾಣದ ಬಡ್ಡಿ ವಿಧಿಸುವ ಮೂಲಕ ವಸೂಲಿಗಾಗಿ ದೌರ್ಜನ್ಯ, ಹಿಂಸೆ ನಡೆಸುತ್ತಿದೆ. ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ದೌರ್ಜನ್ಯದಿಂದ ಬಡ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ರಾಜ್ಯ, ಕೇಂದ್ರ ಸರಕಾರಗಳು ಮೌನ ವಹಿಸುತ್ತಿದೆ. ಸರಕಾರದ ಮೌನದ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟಕ್ಕೆ ಸಿಐಟಿಯು ಮುಂದಾಗಲಿದೆ ಎಂದು ಎಚ್ಚರಿಸಿದ ಅವರು ಕೊರೋನ ಲಾಕ್‍ಡೌನ್‍ನಿಂದಾಗಿ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿರುವ ಗ್ರಾಮೀಣ ಮಹಿಳೆಯರ ಸಾಲವನ್ನು ಸರಕಾರ ಮನ್ನಾ ಮಾಡಬೇಕು, ಆ ಮೂಲಕ ರಾಜ್ಯ ಸರಕಾರ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು. 

ಜನವಾದಿ ಮಹಿಳಾ ಸಂಘಟನೆಯ ದ.ಕ. ಜಿಲ್ಲಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ ಮಾತನಾಡಿ ಕರೋನಾ ಮಹಾಮಾರಿಯಿಂದಾಗಿ ಉದ್ಯೋಗವಿಲ್ಲದೆ ಬದುಕುತ್ತಿರುವ ಮಹಿಳೆಯರ ಮೇಲೆ ಮೈಕ್ರೋ ಫೈನಾನ್ಸ್ ದೌರ್ಜನ್ಯ ನಡೆಸುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿರುವುದು ಸರಿಯಲ್ಲ ಎಂದ ಅವರು ನ್ಯಾಯಕ್ಕಾಗಿ ಮಹಿಳೆಯರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಸಿಐಟಿಯು ಬಂಟ್ವಾಳ ತಾಲೂಕು ಅಧ್ಯಕ್ಷ ರಾಮಣ್ಣ ವಿಟ್ಲ ಮಾತನಾಡಿ ಮೈಕ್ರೋ ಫೈನಾನ್ಸ್ ಏಜೆಂಟ್‍ಗಳು ಮಹಿಳೆಯರಿಗೆ ನೀಡುತ್ತಿರುವ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಲು ತಾಲೂಕು ಆಡಳಿತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರಬಹುದು ಎಂದು ಎಚ್ಚರಿಸಿದರು.  

ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯಾವಾದಿ ಶಿವಕುಮಾರ್ ಎಸ್.ಎಂ. ಮಾತನಾಡಿ ಇಡೀ ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕಿನ ನೀತಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಿಸುತ್ತಾ ಬಡ ಮಹಿಳೆಯರನ್ನು ವಸೂಲಿ ಮಾಡುತ್ತಿದ್ದರೂ ನಮ್ಮನಾಳುವ ಸರಕಾರಗಳು, ನಮ್ಮ ಜಿಲ್ಲೆಯ ಶಾಸಕ, ಸಂಸದರು ಮೌನವಹಿಸಿದ್ದಾರೆ. ಈ ರೀತಿಯ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಶಾಸಕ, ಸಂಸದರ ಮನೆ ಮುಂದೆ ಧರಣಿ ನಡೆಸಬೇಕಾದೀತು ಎಂದು  ಎಚ್ಚರಿಕೆ ನೀಡಿದ ಅವರು ಋಣಮುಕ್ತ ಹೋರಾಟ ಸಮಿತಿ ಹೆಸರಿನಲ್ಲಿ ಕೆಲವರು ಮಹಿಳೆಯರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದು, ಹೋರಾಟವನ್ನು ದಮನಿಸುವವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕರೆ ನೀಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ನಾಯಕಿ, ನ್ಯಾಯವಾದಿ ಸುಕನ್ಯಾ ಹರಿದಾಸ್, ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿಯ ಬಂಟ್ವಾಳ ತಾಲೂಕು ಅಧ್ಯಕ್ಷೆ ಶೋಭಾ ಕೊಯಿಲ, ಬೆಳ್ತಂಗಡಿ ತಾಲೂಕು ಸ್ಥಾಪಕ ಕೊರಗಪ್ಪ ಪೂಜಾರಿ ಅಳದಂಗಡಿ, ಸಿಐಟಿಯು ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಶೇಖರ್ ಎಲ್ ಬೆಳ್ತಂಗಡಿ ಮಾತನಾಡಿದರು.

ಡಿವೈಎಫ್‍ಐ ಮುಖಂಡ, ನ್ಯಾಯವಾದಿ ತುಳಸಿದಾಸ್ ವಿಟ್ಲ, ಪ್ರಮುಖರಾದ ಶ್ರೀನಿವಾಸ್ ಪೂಜಾರಿ, ಜಗದೀಶ್ ಬಂಟ್ವಾಳ, ದೇವರಾಜ್, ಪೂಜಾ, ರಹಮತ್, ಸುಭಾಷಿಣಿ, ಅಶ್ವಿನಿ, ಸೌಮ್ಯ, ಕಾವ್ಯ, ಶಂಕರಿ, ಜಯಶ್ರೀ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. 






  • Blogger Comments
  • Facebook Comments

0 comments:

Post a Comment

Item Reviewed: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯಕ್ಕೆ ಕಡಿವಾಣ ಹಾಕಿ : ಸಂಘಟನೆಗಳ ಒತ್ತಾಯ Rating: 5 Reviewed By: karavali Times
Scroll to Top