ಇಂಡೋ-ಅಸಿಸ್ ಟಿ-20 : ಗಾಯಗೊಂಡ ಜಡೇಜಾ ಬದಲು ಚಹಲ್‍ಗೆ ಅವಕಾಶ ನೀಡಿದ ಟೀಂ ಇಂಡಿಯಾ ನಡೆಗೆ ವ್ಯಾಪಕ ವಿಮರ್ಶೆ - Karavali Times ಇಂಡೋ-ಅಸಿಸ್ ಟಿ-20 : ಗಾಯಗೊಂಡ ಜಡೇಜಾ ಬದಲು ಚಹಲ್‍ಗೆ ಅವಕಾಶ ನೀಡಿದ ಟೀಂ ಇಂಡಿಯಾ ನಡೆಗೆ ವ್ಯಾಪಕ ವಿಮರ್ಶೆ - Karavali Times

728x90

4 December 2020

ಇಂಡೋ-ಅಸಿಸ್ ಟಿ-20 : ಗಾಯಗೊಂಡ ಜಡೇಜಾ ಬದಲು ಚಹಲ್‍ಗೆ ಅವಕಾಶ ನೀಡಿದ ಟೀಂ ಇಂಡಿಯಾ ನಡೆಗೆ ವ್ಯಾಪಕ ವಿಮರ್ಶೆ

 



ಕ್ಯಾನ್‍ಬೆರಾ, ಡಿ. 05, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಗಾಯಗೊಂಡ ರವೀಂದ್ರ ಜಡೇಜಾ ಬದಲಿಗೆ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಂಡ ಟೀಂ ಇಂಡಿಯಾ ನಾಯಕನ ನಡೆಯ ಬಗ್ಗೆ ಇದೀಗ ವ್ಯಾಪಕ ಚರ್ಚೆ, ವಿಮರ್ಶೆಗಳು ಕೇಳಿ ಬರುತ್ತಿದೆ.
    
ಮಿಚೆಲ್ ಸ್ಟಾರ್ಕ್ ಎಸೆದ ಇನ್ನಿಂಗ್ಸ್‍ನ ಕೊನೆಯ ಓವರಿನ ಎರಡನೇ ಎಸೆತ ಬೌನ್ಸರ್ ಆಗಿತ್ತು. ಈ ಎಸೆತ ಜಡೇಜಾ ಹೆಲ್ಮೆಟ್‍ಗೆ ಬಡಿದು ಬ್ಯಾಕ್‍ವರ್ಡ್ ಪಾಯಿಂಟ್‍ಗೆ ಹೋಯಿತು. ಜಡೇಜಾ ಈ ಎಸೆತದಲ್ಲಿ ಒಂದು ರನ್ ಓಡಿದರೂ ಅಂಗಣಕ್ಕೆ ವೈದ್ಯಾಧಿಕಾರಿ ಬಂದು ಕನ್ಕಷನ್ ಪರೀಕ್ಷೆ ನಡೆಸಿರಲಿಲ್ಲ. ನಂತರದ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಔಟಾದ ಕಾರಣ ಮತ್ತೆ ಜಡೇಜಾ ಸ್ಟ್ರೈಕ್‍ಗೆ ಬಂದರು. 4 ಮತ್ತು 5ನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಜಡೇಜಾ ಕೊನೆಯ ಎಸೆತದಲ್ಲಿ 1 ರನ್ ತೆಗೆಯುವ ಮೂಲಕ ತಂಡದ ಮೊತ್ತವನ್ನು 160ಕ್ಕೆ ಏರಿಸಿದ್ದರು.

    ಇನ್ನಿಂಗ್ಸ್ ಬ್ರೇಕ್ ಸಂದರ್ಭ ಭಾರತ ತಂಡ ಜಡೇಜಾ ಅವರಿಗೆ ಗಂಭೀರ ಗಾಯವಾದ ಕಾರಣ ಅವರ ಬದಲು ಯಜುವೇಂದ್ರ ಚಹಲ್ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಂಡಿತು. ಟೀಮ್ ಇಂಡಿಯಾ ನಾಯಕ ಕನ್ಕಷನ್ ಸಬ್ ತೆಗೆದುಕೊಳ್ಳುತ್ತಿರುವುದಾಗಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಗಮನಕ್ಕೆ ತಂದರು. ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್‍ಗೆ ತಿಳಿಸಿದಾಗ ಲ್ಯಾಂಗರ್ ಅಸಮಾಧಾನಗೊಂಡಿದ್ದರು. ಅಷ್ಟೇ ಅಲ್ಲದೇ ಡೇವಿಡ್ ಬೂನ್ ಎದುರು ವಾದಕ್ಕಿಳಿದ ಲ್ಯಾಂಗರ್ ಇದು ಸರಿಯಾದ ನಿರ್ಧಾರ ಅಲ್ಲ ಎಂದು ಪ್ರತಿಕ್ರಯಿಸಿದ್ದರು. ಆದರೆ ಐಸಿಸಿ ನಿಯಮ ಪಾಲನೆಗಾಗಿ ರೆಫ್ರಿ ಡೇವಿನ್ ಬೂನ್ ಬದಲಿ ಆಟಗಾರನನ್ನು ಆಡಿಸಲು ಟೀಂ ಇಂಡಿಯಾ ನಾಯಕನಿಗೆ ಒಪ್ಪಿಗೆ ನೀಡಿದರು. 

    ರವೀಂದ್ರ ಜಡೇಜಾ ಆಲ್‍ರೌಂಡರ್ ಆಟಗಾರನಾಗಿದ್ದು ಗಾಯಗೊಂಡ ಅವರ ಬದಲು ಚಹಲ್ ಅವರನ್ನು ಆಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಅಷ್ಟೇ ಅಲ್ಲದೇ ಜಡೇಜಾ ಗಂಭೀರವಾಗಿ ಗಾಯಗೊಂಡಿದ್ದರೆ ಅರ್ಧದಲ್ಲೇ ಕ್ರೀಡಾಂಗಣವನ್ನು ತೊರೆಯಬೇಕಿತ್ತು. ಆದರೆ ನಂತರ 9 ರನ್ ಹೊಡೆದಿದ್ದಾರೆ. ಹೀಗಿರುವಾಗ ಗಾಯದ ಬಗ್ಗೆಯೇ ಅನುಮಾನ ಎದ್ದಿದೆ ಎಂಬ ಚರ್ಚೆ ಕೇಳಿ ಬರುತ್ತಿದೆ.

    ಜಡೇಜಾ ಅವರನ್ನು ಟೀಕೆ ಮಾಡಿ ಸುದ್ದಿಯಾಗಿದ್ದ ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್, ಈ ಪಂದ್ಯದ ವೇಳೆ ಭಾರತ ತಂಡ ಕನ್ಕಷನ್ ಸಬ್‍ಸ್ಟಿಟ್ಯೂಟ್ ನಿಯಮದ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ವಿಮರ್ಶಿಸಿದ್ದು, ಚರ್ಚೆಗೆ ಮತ್ತಷ್ಟು ಬಿಸಿಯೇರುವಂತೆ ಮಾಡಿದೆ. ಐಸಿಸಿ ಈ ನಿಯಮದ ದುರ್ಬಳಕೆ ಆಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದವರು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಮೆಂಟೇಟರ್ ಹರ್ಷ ಭೋಗ್ಲೆ, ಕೆಲ ಪ್ರಕರಣಗಳಲ್ಲಿ ಬ್ಯಾಟ್ಸ್‍ಮನ್‍ಗಳಿಗೆ ತಡವಾಗಿ ಕನ್ಕಷನ್ ಗುಣಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಳೆದ ವರ್ಷ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ತಂಡ ಇದೇ ರೀತಿ ತಡವಾಗಿ ಕನ್ಕಷನ್ ಸಬ್ ತೆಗೆದುಕೊಂಡ ಉದಾಹರಣೆ ಇದೆ ಎಂದು ಹೇಳಿ ಟೀಂ ಇಂಡಿಯಾ ನಡೆಯನ್ನು ಸಮರ್ಥಿಸಿಕೊಂಡರು.

    ಬ್ಯಾಟಿಂಗ್ ವೇಳೆ ಚೆಂಡು ಬ್ಯಾಟ್ಸ್‍ಮನ್‍ನ ಹೆಲ್ಮೆಟ್‍ಗೆ ಬಡಿದರೆ ಆವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಬದಲಿ ಆಟಗಾರನನ್ನು ಆಡಿಸಬಹದು ಎಂದು ಐಸಿಸಿ 2019ರ ಜುಲೈನಲ್ಲಿ ನಿಯಮವನ್ನು ತಂದಿತ್ತು. ಈ ರೀತಿ ಆಡುವ 11ರ ಬಳಗಕ್ಕೆ ಬದಲಿ ಆಟಗಾರನಾಗಿ ಸೇರುವ ಆಟಗಾರನಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಅವಕಾಶವನ್ನು ನೀಡಲಾಗುತ್ತದೆ.

    ಈ ಪಂದ್ಯದಲ್ಲಿ ಜಡೇಜಾ ಔಟಾಗದೇ 44 ರನ್ (23 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದರೆ ಚಹಲ್ 4 ಓವರ್ ಎಸೆದು 25 ರನ್ ನೀಡಿ 3 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪಂದ್ಯವನ್ನು ಭಾರತ 11 ರನ್‍ಗಳಿಂದ ಗೆದ್ದುಕೊಂಡಿತ್ತು.






  • Blogger Comments
  • Facebook Comments

0 comments:

Post a Comment

Item Reviewed: ಇಂಡೋ-ಅಸಿಸ್ ಟಿ-20 : ಗಾಯಗೊಂಡ ಜಡೇಜಾ ಬದಲು ಚಹಲ್‍ಗೆ ಅವಕಾಶ ನೀಡಿದ ಟೀಂ ಇಂಡಿಯಾ ನಡೆಗೆ ವ್ಯಾಪಕ ವಿಮರ್ಶೆ Rating: 5 Reviewed By: karavali Times
Scroll to Top