ಸರಕಾರ ಸತ್ತಿದೆ, ಸರಕಾರ ಚಾಪೆ ಹಾಕಿ ಮಲಗಿದೆ : ಬಂಟ್ವಾಳ ಪುರಪಿತೃ ಗೋವಿಂದ ಪ್ರಭು ಗರಂ - Karavali Times ಸರಕಾರ ಸತ್ತಿದೆ, ಸರಕಾರ ಚಾಪೆ ಹಾಕಿ ಮಲಗಿದೆ : ಬಂಟ್ವಾಳ ಪುರಪಿತೃ ಗೋವಿಂದ ಪ್ರಭು ಗರಂ - Karavali Times

728x90

4 February 2021

ಸರಕಾರ ಸತ್ತಿದೆ, ಸರಕಾರ ಚಾಪೆ ಹಾಕಿ ಮಲಗಿದೆ : ಬಂಟ್ವಾಳ ಪುರಪಿತೃ ಗೋವಿಂದ ಪ್ರಭು ಗರಂ

ಬಂಟ್ವಾಳ, ಫೆ. 04, 2021 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಮಂಜೂರಾತಿಗಾಗಿ ಕರ್ನಾಟಕ ನೀರು ಸರಬರಾಜು ಮಂಡಳಿ ಅಧಿಕಾರಿಗಳೊಂದಿಗೆ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆಯ ವಿಶೇಷ ಸಭೆಯಲ್ಲಿ ನೀರು ಸರಬರಾಜು ಮಂಡಳಿಯ ಅವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷ ಬಿಜೆಪಿಯ ಹಿರಿಯ ಸದಸ್ಯ ಎ ಗೋವಿಂದ ಪ್ರಭು ಅವರು ಒಂದು ಹಂತದಲ್ಲಿ ಸರಕಾರ ಸತ್ತಿದೆ, ಸರಕಾರ ಚಾಪೆ ಹಾಕಿ ಮಲಗಿದೆ ಎಂದು ಅಧಿಕಾರಿಗಳ ಸ್ಪಂದನೆ ಇಲ್ಲದ್ದಕ್ಕೆ ಸಭೆಯುದ್ದಕ್ಕೂ ಗುಡುಗಿದರು. ಸಮಗ್ರ ಕುಡಿಯುವ ನೀರು ಯೋಜನೆ ಎಂಬುದು ಬಂಟ್ವಾಳ ಪುರಸಭೆಗೆ ಒಂದು ಬಿಳಿಯಾನೆ ಇದ್ದಂತೆ. ಹೊಸ ಯೋಜನೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಹಳೆ ಯೋಜನೆಯ ಪಂಪ್‍ಸೆಟ್‍ಗಳು ಈಗಲೂ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಬಂಟ್ವಾಳ ಪುರಸಭೆಗೆ ಈ ಯೋಜನೆಯಿಂದ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು. ನೀರು ಸರಬರಾಜಿನಿಂದ ಸುಮಾರು 5 ಲಕ್ಷ ಆದಾಯ ಬಂದರೆ, ದುಬಾರಿ ವಿದ್ಯುತ್ ಬಿಲ್ ಸಹಿತ ಸುಮಾರು 30-40 ಲಕ್ಷ ರೂಪಾಯಿ ಖರ್ಚಾಗುತ್ತಿದೆ ಎಂದು ಬೊಟ್ಟು ಮಾಡಿದರು. ಸಭೆಯುದ್ದಕ್ಕೂ ನೀರು ಸರಬರಾಜು ಮಂಡಳಿ ಅಧಿಕಾರಿಗಳ ವಿರುದ್ದ ಹರಿಹಾಯ್ದ ಗೋವಿಂದ ಪ್ರಭು ಡಿಜಟಲ್ ಯುಗದಲ್ಲಿ ಎಲ್ಲವೂ ಆಧುನೀಕರಣಗೊಳ್ಳುತ್ತಿದ್ದರೂ ಬಂಟ್ವಾಳ ಪುರಸಭೆಯ ನೀರು ಸರಬರಾಜಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾತ್ರ ಹಳೆ ವ್ಯವಸ್ಥೆಗಳನ್ನೇ ನೆಚ್ಚಿಕೊಂಡಿದ್ದಾರೆ. ಇದರಿಂದಾಗಿ ಜಗತ್ತಿನಲ್ಲೇ ಬಂಟ್ವಾಳ ಪುರಸಭೆಯಷ್ಟು ಉದಾರ ದಾನಿ ಬೇರೊಬ್ಬರಿಲ್ಲ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು. ಪುರಸಭಾ ವ್ಯಾಪ್ತಿಯ ಸರಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ಕಬಳಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ನಾವೇನಾದರೂ ಪ್ರಶ್ನಿಸಲು ಹೋದರೆ ಕಾನೂನು ಕೈಗೆತ್ತಿಕೊಂಡರು ಎಂಬ ಗಂಭೀರ ಆರೋಪ ನಮ್ಮ ಮೇಲೆ ಬರುತ್ತದೆ. ಈ ಕಾರಣದಿಂದಾಗಿ ಸಾರ್ವಜನಿಕರಿಂದ ಉಗಿಸಿಕೊಳ್ಳುವ ಸರದಿ ಪುರಸಭಾ ಸದಸ್ಯರದ್ದು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸರಕಾರದ ವ್ಯವಸ್ಥೆಗಳೆಲ್ಲವೂ ಚಾಪೆ ಹಾಕಿ ಮಲಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಆಡಳಿತ ಪಕ್ಷದ ಕಾರ್ಯವೈಖರಿ ಬಗ್ಗೆಯೂ ಒಂದು ಹಂತದಲ್ಲಿ ಪ್ರಶ್ನಿಸಿದ ಗೋವಿಂದ ಪ್ರಭು ಚುನಾಯಿತ ಉಳಿದ ಸದಸ್ಯರುಗಳನ್ನು ಬಿಟ್ಟು ಅಧ್ಯಕ್ಷರು ಮಾತ್ರ ಪಿಡಿ ಜೊತೆ ಗುಪ್ತ ಸಭೆ ನಡೆಸಿದ ಔಚಿತ್ಯವನ್ನು ಸಂಶಯಾಸ್ಪದವಾಗಿ ಪ್ರಶ್ನಿಸಿದರು. ಈ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರುಗಳಾದ ಪಿ ರಾಮಕೃಷ್ಣ ಆಳ್ವ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ವಾಸು ಪೂಜಾರಿ ಲೊರೆಟ್ಟೊ, ಹಸೈನಾರ್ ಶಾಂತಿಅಂಗಡಿ, ಗಂಗಾಧರ ಮೊದಲಾದವರು ಇದು ಅಧ್ಯಕ್ಷರ ತೀರ್ಮಾನವಲ್ಲ. ಬದಲಿಗೆ ಪಿಡಿ ಅವರು ನೇರವಾಗಿ ಮುಖ್ಯಾಧಿಕಾರಿ ಮೂಲಕ ಅಧ್ಯಕ್ಷರು ಮಾತ್ರ ಇದ್ದರೆ ಸಾಕು ಎಂದು ಹೇಳಿದ ಕಾರಣಕ್ಕಾಗಿ ಅಧ್ಯಕ್ಷರು ಮಾತ್ರ ಇದ್ದು ಅಧಿಕಾರಿಗಳು ಸಭೆ ನಡೆಸಿದ್ದಾರೆ ಎಂದು ತಿರುಗೇಟು ನೀಡಿದರು. ಈ ಬಗ್ಗೆ ಸ್ವತಃ ಮುಖ್ಯಾಧಿಕಾರಿಗಳೇ ಸಭೆಗೆ ತಿಳಿಸಿ ಎಂದು ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು ಸೂಚಿಸಿದರು. ಈ ವೇಳೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಪಿಡಿ ಅವರು ಅಧ್ಯಕ್ಷರನ್ನು ಮಾತ್ರ ಕರೆದ ಕಾರಣಕ್ಕಾಗಿ ಈ ರೀತಿ ಸಭೆ ನಡೆಸಲಾಗಿದೆ ಎಂದು ಸಭೆಗೆ ತಿಳಿಸಿದರು. ಮುಖ್ಯಾಧಿಕಾರಿ ಸ್ಪಷ್ಟನೆಯಿಂದಲೂ ತೃಪ್ತರಾಗದ ಗೋವಿಂದ ಪ್ರಭು ಅವರು ಮತ್ತೆ ಅಧ್ಯಕ್ಷರ ಮೇಲೆ ಸಂಶಯ ವ್ಯಕ್ತಪಡಿಸಿ ಮಾತನಾಡಿದ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರು ಇಡೀ ದಿನ ಮುಖ್ಯಾಧಿಕಾರಿ ಛೇಂಬರಿನಲ್ಲಿ ಝಂಡಾ ಹೂಡುವ ಪ್ರಭುಗಳಿಗೆ ಎಲ್ಲಾ ವಿಷಯ ಗೊತ್ತಿದ್ದರರೂ ವಿನಾ ಕಾರಣ ಆರೋಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಝಾಡಿಸಿದರು. ಈ ಸಂದರ್ಭ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಕೆಲ ಕಾಲ ತೀವ್ರ ಆರೋಪ-ಪ್ರತ್ಯಾರೋಪಗಳು ನಡೆಯಿತು. ಬಳಿಕ ಗೋವಿಂದ ಪ್ರಭುಗಳ ಎಲ್ಲಾ ಪ್ರಶ್ನೆಗಳಿಗೂ ನೀರು ಸರಬರಾಜು ಮಂಡಳಿಯ ಇಂಜಿನಿಯರ್ ಶೋಭಾಲಕ್ಷ್ಮಿ ಅವರು ಸಾವಧಾನವಾಗಿ ಉತ್ತರಿಸಿ ಆಗಿರುವ ಕೆಲವೊಂದು ತಪ್ಪುಗಳನ್ನು ಒಪ್ಪಿಕೊಂಡು ಮುಂದಕ್ಕೆ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.
  • Blogger Comments
  • Facebook Comments

0 comments:

Post a Comment

Item Reviewed: ಸರಕಾರ ಸತ್ತಿದೆ, ಸರಕಾರ ಚಾಪೆ ಹಾಕಿ ಮಲಗಿದೆ : ಬಂಟ್ವಾಳ ಪುರಪಿತೃ ಗೋವಿಂದ ಪ್ರಭು ಗರಂ Rating: 5 Reviewed By: karavali Times
Scroll to Top