ನಲಪಾಡ್ ಮುಹಮ್ಮದ್‍ಗೆ ಹೆಚ್ಚು ಮತ, ರಕ್ಷಾ ರಾಮಯ್ಯಗೆ ಮಣೆ : ರಾಜ್ಯ ಯುವ ಕಾಂಗ್ರೆಸ್ಸಿನಲ್ಲಿ ಹೀಗೊಂದು ವಿಲಕ್ಷಣ ಬೆಳವಣಿಗೆ - Karavali Times ನಲಪಾಡ್ ಮುಹಮ್ಮದ್‍ಗೆ ಹೆಚ್ಚು ಮತ, ರಕ್ಷಾ ರಾಮಯ್ಯಗೆ ಮಣೆ : ರಾಜ್ಯ ಯುವ ಕಾಂಗ್ರೆಸ್ಸಿನಲ್ಲಿ ಹೀಗೊಂದು ವಿಲಕ್ಷಣ ಬೆಳವಣಿಗೆ - Karavali Times

728x90

4 February 2021

ನಲಪಾಡ್ ಮುಹಮ್ಮದ್‍ಗೆ ಹೆಚ್ಚು ಮತ, ರಕ್ಷಾ ರಾಮಯ್ಯಗೆ ಮಣೆ : ರಾಜ್ಯ ಯುವ ಕಾಂಗ್ರೆಸ್ಸಿನಲ್ಲಿ ಹೀಗೊಂದು ವಿಲಕ್ಷಣ ಬೆಳವಣಿಗೆ

ಬೆಂಗಳೂರು, ಫೆ. 04, 2021 (ಕರಾವಳಿ ಟೈಮ್ಸ್) : ರಾಜ್ಯ ಯುವ ಕಾಂಗ್ರೆಸ್ ಚುನಾವಣೆ ನಡೆದು ಫಲಿತಾಂಶ ಬರಲು ತಿಂಗಳಾದರೂ ಹಿಂದೆಂದೂ ಕಂಡು ಕೇಳರಿಯದ ರೀತಿಯ ಫಲಿತಾಂಶ ಘೋಷಣೆಯಾಗಿದ್ದು, ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೇ ಒಂದು ರೀತಿಯ ಜಿಜ್ಞಾಸೆಗೆ ಕಾರಣವಾಗಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಕಳೆದ ಜನವರಿಯಲ್ಲಿ ನಡೆದ ಚುನಾವಣೆಯ ಫಲಿತಾಂಶವನ್ನು ಎಐಸಿಸಿ ಗುರುವಾರ ಸಂಜೆ ಘೋಷಿಸಿದೆ. ಶಾಂತಿನಗರ ಶಾಸಕ ಎನ್ ಎ ಹಾರಿಸ್ ಅವರ ಪುತ್ರ ನಲಪಾಡ್ ಮುಹಮ್ಮದ್ ಅವರು ಅತೀ ಹೆಚ್ಚು 64,203 ಮತಗಳನ್ನು ಪಡೆದರೂ, 57,271 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದ ಮಾಜಿ ಸಚಿವ ಎಂ ಆರ್ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ಸಿನ ನೂತನ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ನಲಪಾಡ್ ಮುಹಮ್ಮದ್ ಅವರ ವಿರುದ್ದ ಕ್ರಿಮಿನಲ್ ಪ್ರಕರಣಗಳಿರುವ ಹಿನ್ನಲೆಯಲ್ಲಿ ಎಐಸಿಸಿಯ ಫೇಮ್ ಸಮಿತಿ ಅವರ ಸ್ಪರ್ಧೆಯನ್ನೇ ಅನೂರ್ಜಿತಗೊಳಿಸಿದೆ ಎನ್ನಲಾಗಿದೆ. ಈ ಒಂದು ಬೆಳವಣಿಗೆ ಇದೀಗ ಕೈ ಪಾಳಯದಲ್ಲಿ ಭಾರೀ ಚರ್ಚೆಗಳನ್ನೇ ಹುಟ್ಟು ಹಾಕಿದೆ. ಕ್ರಿಮಿನಲ್ ಪ್ರಕರಣಗಳ ಹಿನ್ನಲೆಯಲ್ಲಿ ಸ್ಪರ್ಧೆ ಅನರ್ಹ ಎಂದಾದರೆ, ಚುನಾವಣೆಗೆ ಸ್ಪರ್ಧಿಸುವ ವೇಳೆಯೇ ಇದನ್ನು ಬಹಿರಂಗಪಡಿಸಿಲ್ಲ ಯಾಕೆ ಎಂಬ ಪ್ರಶ್ನೆ ಇದೀಗ ಪಕ್ಷದ ಕಾರ್ಯಕರ್ತರು ಹಾಗೂ ನಲಪಾಡ್ ಬೆಂಬಲಿಗ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ಯುವ ಕಾಂಗ್ರೆಸ್ ಚುನಾವಣೆಯ ಕ್ರಮವೇ ಇದೀಗ ಚರ್ಚಾಸ್ಪದವಾಗಿದೆ. ಚುನಾವಣೆ ನಡೆದು ಕಳೆದ ಜನವರಿ 15ರಂದೇ ಫಲಿತಾಂಶ ಪ್ರಕಟಗೊಳ್ಳಬೇಕಿದ್ದರೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಿಂದಾಗಿ ಫಲಿತಾಂಶ ಮುಂದೂಡಲ್ಪಟ್ಟು ಜನವರಿ 25 ರಂದು ಫಲಿತಾಂಶ ಘೋಷಣೆ ಎಂದು ಹೇಳಲಾಗಿತ್ತು. ಅಂದೂ ಕೂಡಾ ಫಲಿತಾಂಶ ಘೋಷಣೆಯಾಗದೆ ಫೆಬ್ರವರಿ 4ರವರೆಗೂ ಅದನ್ನು ಮುಂದೂಡಲಾಗಿತ್ತು. ಫೆ. 3 ರಂದು ಎಲ್ಲಾ ಬ್ಲಾಕ್ ಯುವ ಅಧ್ಯಕ್ಷರ ಫಲಿತಾಂಶ ಘೋಷಿಸಲಾಗಿತ್ತು. ಫೆ 4 ಗುರುವಾರ ಅಪರಾಹ್ನದ ಬಳಿಕ ದಿಢೀರ್ ಆಗಿ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣಾ ಫಲಿತಾಂಶ ಘೋಷಿಸಲಾಗಿದೆ. ಅದರಲ್ಲೂ ಇಡೀ ಪಕ್ಷ ವಲಯ ನಿರೀಕ್ಷದ ರೀತಿಯ ವಿಲಕ್ಷಣ ಫಲಿತಾಂಶ ಘೋಷಣೆ ಮಾಡಲಾಗಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗೆ ಸಂಬಂಧಪಟ್ಟಂತೆ ಇದುವರೆಗೂ ಪಕ್ಷದ ಹೈಕಮಾಂಡ್ ಆಗಲೀ, ಹಿರಿಯ ನಾಯಕರಾಗಲೀ ಇದುವರೆಗೂ ಯಾವುದೇ ಸಮಜಾಯಿಷಿ ನೀಡಿಲ್ಲ. ಫಲಿತಾಂಶವನ್ನು ಯುವ ಕಾಂಗ್ರೆಸ್ಸಿನ ಅಧಿಕೃತ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗಾಗಿ 7 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಮಿಥುನ್ ಚುನಾವಣಾ ಕಣದಿಂದ ಅಂತಿಮ ಕ್ಷಣದಲ್ಲಿ ಹಿಂದೆ ಸರಿದ ಪರಿಣಾಮ 6 ಮಂದಿ ಕಣದಲ್ಲಿದ್ದರು. ಈ ಪೈಕಿ 3,156 ಮತಗಳನ್ನು ಪಡೆದ ಭವ್ಯಾ ಕೆ ಆರ್ ಅವರು ಮಹಿಳಾ ಕೋಟಾದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಮಂಜುನಾಥ ಎಚ್ ಎಸ್ ಅವರು 18,137 ಮತಗಳನ್ನು ಪಡೆದು ಮುಕ್ತ ಕೋಟಾದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂದೀಪ್ ನಾಯಕ್ ಅವರು 736 ಮತಗಳನ್ನು ಪಡೆದು ಎಸ್.ಸಿ./ಎಸ್.ಟಿ. ಕೋಟಾದಿಂದ ಉಪಾಧ್ಯಕ್ಷ ಹುದ್ದೆ ಪಡೆದುಕೊಂಡಿದ್ದಾರೆ. ಉಳಿದಂತೆ ಸಯ್ಯದ್ ಖಾಲಿದ್ ಅಹ್ಮದ್ ಅವರು 4,740 ಮತಗಳನ್ನು ಪಡೆದರೂ ಯಾವುದೇ ಹುದ್ದೆಯನ್ನು ವೆಬ್‍ಸೈಟ್ ತೋರಿಸಿಲ್ಲ. ರಾಜ್ಯದ ಒಟ್ಟು 1,92,703 ಮಂದಿ ಯುವ ಕಾಂಗ್ರೆಸ್ ಮತದಾರರ ಪೈಕಿ 14,150 ಮಂದಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. 27,206 ಮಂದಿಯ ಮತ ತಿರಸ್ಕøತಗೊಂಡಿದೆ ಎಂದು ಯುವ ಕಾಂಗ್ರೆಸ್ ವೆಬ್‍ಸೈಟ್‍ನಲ್ಲಿ ನಮೂದಾಗಿರುವ ಅಂಕಿ ಅಂಶ ಸ್ಪಷ್ಟಪಡಿಸಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಬ್ಯಾಲೆಟ್ ಪೇಪರ್ ಮತದಾನದ ಬದಲಿಗೆ ಮೊಬೈಲ್ ಆಪ್ ಮೂಲಕ ಮತದಾನ ನಡೆಸಲಾಗಿತ್ತು. ಜನವರಿ 10 ರಿಂದ 12ರವರೆಗೆ ರಾಜ್ಯ, ಜಿಲ್ಲೆ ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿ ಹುದ್ದೆಗೆ ಚುನಾವಣೆ ನಡೆದಿತ್ತು.
  • Blogger Comments
  • Facebook Comments

0 comments:

Post a Comment

Item Reviewed: ನಲಪಾಡ್ ಮುಹಮ್ಮದ್‍ಗೆ ಹೆಚ್ಚು ಮತ, ರಕ್ಷಾ ರಾಮಯ್ಯಗೆ ಮಣೆ : ರಾಜ್ಯ ಯುವ ಕಾಂಗ್ರೆಸ್ಸಿನಲ್ಲಿ ಹೀಗೊಂದು ವಿಲಕ್ಷಣ ಬೆಳವಣಿಗೆ Rating: 5 Reviewed By: karavali Times
Scroll to Top