ಸ್ವಾತಂತ್ರ್ಯದ ಬಗ್ಗೆ ಸ್ವತಂತ್ರವಾಗಿ ತಿಳಿಯಬೇಕು : ಬರೇ ಆಚರಣೆಗೆ ಸೀಮಿತವಾಗದಂತೆ ಎಚ್ಚರ ಅಗತ್ಯ - Karavali Times ಸ್ವಾತಂತ್ರ್ಯದ ಬಗ್ಗೆ ಸ್ವತಂತ್ರವಾಗಿ ತಿಳಿಯಬೇಕು : ಬರೇ ಆಚರಣೆಗೆ ಸೀಮಿತವಾಗದಂತೆ ಎಚ್ಚರ ಅಗತ್ಯ - Karavali Times

728x90

14 August 2021

ಸ್ವಾತಂತ್ರ್ಯದ ಬಗ್ಗೆ ಸ್ವತಂತ್ರವಾಗಿ ತಿಳಿಯಬೇಕು : ಬರೇ ಆಚರಣೆಗೆ ಸೀಮಿತವಾಗದಂತೆ ಎಚ್ಚರ ಅಗತ್ಯ



- ಡಿ.ಎಸ್.ಐ.ಬಿ ಪಾಣೆಮಂಗಳೂರು

ಬ್ರಿಟಿಷರ ಆಡಳಿತದಿಂದ ಭಾರತ ದೇಶ 1947ರ ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶದಾದ್ಯಂತ ರಾಷ್ಟ್ರೀಯ ರಜಾ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿ ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.

ರಾಷ್ಟ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ 22, 1947ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ 26, 1950 ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯ ಭಾರದ ಬಾವುಟವಾಗಿಯೂ, 26 ಜನವರಿ, 1950ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ - ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.

ಸ್ವಾತಂತ್ರ್ಯ ದಿನಾಚರಣೆ ಎಂಬುದು ಪ್ರತಿ ದೇಶದ ರಾಷ್ಟ್ರೀಯ ಹಬ್ಬ, ಒಂದು ಐತಿಹಾಸಿಕ ದಿನ. ಇದರ ಹಿಂದೆ ದೀರ್ಘ ಇತಿಹಾಸ ಇರುತ್ತದೆ. ಈ ದೇಶದಲ್ಲಿ ಹುಟ್ಟಿದ ಎಲ್ಲ ಪ್ರಜೆಗೂ ಸ್ವಾತಂತ್ರ್ಯ ದಿನಾಚರಣೆ ಎಂದರೇನು, ಅದನ್ನು ಏಕೆ, ಯಾವಾಗ ಆಚರಿಸುತ್ತಾರೆ, ಅದರ ಹಿಂದಿನ ಕಥೆಯೇನು ಎಂಬುದು ತಿಳಿದಿರಬೇಕಾಗುತ್ತದೆ. ನಾಲ್ಕೈದು ವರ್ಷದ ಮಗು ಸ್ವಾತಂತ್ರ್ಯದಿನಾಚರಣೆ ಬಂದಾಗ ಹಾಗೆಂದರೇನು ಎಂದು ಕೇಳಿಯೇ ಕೇಳುತ್ತದೆ. ಆಗ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಘಟನೆಯನ್ನು ವಿವರಿಸಲು ಹೊರಟರೆ ಪುಟ್ಟ ಮಕ್ಕಳಿಗೆ ಅರ್ಥವಾಗುವುದಿಲ್ಲ. ಅವರ ವಯಸ್ಸಿಗೆ ತಕ್ಕಂತೆ ವಿವರಿಸುತ್ತಾ ಹೋದರೆ ಮಾತ್ರ ಅವರು ಅದನ್ನು ಅರ್ಥೈಸಲು ಸಾಧ್ಯ. ವಿಷಯ ಯಾವುದಾದರೂ ಅಷ್ಟೇ ಕಾಲಕ್ಕೆ ತಕ್ಕಂತೆ ವಿವರಿಸಿದರೆ ಮಾತ್ರ ತಿಳಿಯಲು ಸಾಧ್ಯವಾಗುತ್ತದೆ.

ಪುಟ್ಟ ಮಗುವಿಗೆ ಹೆತ್ತವರು ಸರಳವಾಗಿ ಅರ್ಥೈಸಬಹುದು. ನಿನಗೆ ಇಷ್ಟ ಬಂದಂತೆ ಇರಲು ಅವಕಾಶ ಕೊಡುತ್ತಾರಲ್ಲವೇ? ಅದು ಸ್ವಾತಂತ್ರ್ಯ. ನಮಗೆ ಹೊರಗೆ ಓಡಾಡಲು ಯಾರ ಭಯವೂ, ಯಾರ ಹಂಗೂ ಇಲ್ಲದಿರುವುದೇ ಸ್ವಾತಂತ್ರ್ಯ ಎಂದು ಹೇಳಿದರೆ ಮಗುವಿಗೆ ಸ್ವಲ್ಪ ಅರ್ಥವಾಗುತ್ತದೆ. ಈ ಮೂಲಕ ಮಕ್ಕಳಿಗೆ ನಮ್ಮ ದೇಶದ ಸ್ವಾತಂತ್ರ್ಯ ಎಂದರೇನು, ಅದು ಹೇಗೆ ಸಿಕ್ಕಿತು ಎಂದು ಒಂದೊಂದನ್ನೆ ವಿವರಿಸಿದರೆ ಅರ್ಥವಾಗಬಹುದು. ಶಿಕ್ಷಕರು ಕೂಡ ದೇಶಕ್ಕೆ ಸಂಬಂಧಪಟ್ಟ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ವಿವರಿಸಿಕೊಡಬೇಕು. 

ನಾನು ಇತ್ತೀಚೆಗಷ್ಟೇ ಒಂದು ವೀಡಿಯೋವನ್ನು ವೀಕ್ಷಿಸಿದೆ. ಇಬ್ಬರು ಯುವಕರು ರಸ್ತೆಯಲ್ಲಿ ಭಾರತದ ಬಾವುಟವೊಂದನ್ನು ನೆಲದಲ್ಲಿ ಇಟ್ಟು ದೂರದಿಂದ ವೀಡಿಯೋ ರೆಕಾರ್ಡ್ ಮಾಡುತ್ತಿರುತ್ತಾರೆ. ಅದೆಷ್ಟೋ ಜನ ಅದೇ ರಸ್ತೆಯಲ್ಲಿ ಬಂದರು ನೆಲದಲ್ಲಿರುವ ಬಾವುಟವನ್ನು ಎತ್ತಿ ಗೌರವಿಸುವುದಿಲ್ಲ. ಕೆಲವೊಂದು ಸಮಯದ ನಂತರ ಬಾವುಟದ ಜೊತೆ ನೋಟುಗಳನ್ನು ಇಡುತ್ತಾರೆ. ಜನರು ನೋಟು ಎತ್ತುತ್ತಾರೆ ವಿನಃ ಬಾವುಟವನ್ನು ನೋಡಿಯು ಎತ್ತಿಡುವಷ್ಟು ಪ್ರೀತಿ ಅವರಿಗೆ ಇರುವುದಿಲ್ಲ. ಇದು ಅವರ ತಪ್ಪು ಅಂತ ಹೇಳಲು ಕೂಡ ಸಾಧ್ಯವಿಲ್ಲ ಕಾರಣ ತುಂಬಾ ಜನ ಆಗಸ್ಟ್ 15 ರಂದು ಮಾತ್ರ ಸ್ವಾತಂತ್ರ್ಯ ದಿನ, ಒಂದು ದಿನ ಮಾತ್ರ ತ್ರಿವರ್ಣ ಧ್ವಜಕ್ಕೆ ಗೌರವವೆಂದು ತಿಳಿದಿದ್ದಾರೆ. ಇದಕ್ಕೆಲ್ಲ ಕಾರಣ ದೇಶದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು. ತಿಳಿದಿರುವ ಪ್ರತಿಯೊಬ್ಬರೂ ಕೂಡ ಸ್ವಾತಂತ್ರ್ಯದ ಮಹತ್ವ ಸಾರುವ ಸಂದೇಶಗಳನ್ನು ತಿಳಿಯಪಡಿಸಬೇಕು.

ಸ್ವ್ವಾತಂತ್ರ್ಯ ದಿನದಂದು ಸಿಹಿ ತಿಂಡಿ ಸಿಗುತ್ತವೆಂದು ತುಂಬಾ ಜನ ಹೇಳುತ್ತಾರೆ. ಆದರೆ ಸ್ವಾತಂತ್ರ್ಯದ ಬಗ್ಗೆ ತುಂಬಾ ಜನರಿಗೆ ತಿಳಿವಳಿಕೆ ಇಲ್ಲ. ಇದನ್ನು ಹೇಳಿ ಕೊಡುವಷ್ಟು ತಾಳ್ಮೆಯೂ ಕೆಲವರಿಗೆ ಇರುವುದಿಲ್ಲ. ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿ ಶುಭಾಶಯ ಸಲ್ಲಿಸಿ, ರಾಷ್ಟ್ರಗೀತೆ ಹಾಡಿ ಸಿಹಿ ಹಂಚಿ ಜಾಗ ಖಾಲಿ ಮಾಡಿ ಬಿಡ್ತಾರೆ. ಇದು ತುಂಬಾ ತಪ್ಪಾದ ಕೆಲಸವೆಂದು ಹೇಳಬಹುದು. ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯದ ಬಗ್ಗೆ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ, ಪುಟ್ಟ ಮಕ್ಕಳಿಗೆ ವಿಶೇಷವಾಗಿ ಅರ್ಥೈಸಿ ತಿಳಿಸಿಕೊಡಬೇಕು. ತುಂಬಾ ಮಕ್ಕಳು ಸ್ವಾತಂತ್ರ್ಯ ಅಂದರೆ ಏನೆಂದೆ ತಿಳಿದಿರುವುದಿಲ್ಲ. ಧ್ವಜಾರೋಹಣ ಮಾಡಿ ಸಿಹಿ ತಿಂಡಿ ತಿನಿಸುಗಳನ್ನು ಕೊಟ್ಟು ಶಾಲೆಗೆ ರಜೆ ಸಿಗುತ್ತವೆ ಅಷ್ಟೇ ಎಂದು ತಿಳಿದಿರುತ್ತಾರೆ. ಸ್ವಾತಂತ್ರ್ಯ ಎಂಬುದು ಏನೆಂದು ಗೊತ್ತಿರಲ್ಲ. ತುಂಬಾ ಜನರಿಗೆ ಎಷ್ಟನೇಯ ಸ್ವಾತಂತ್ರ್ಯ ಎಂದೇ ಗೊತ್ತಿಲ್ಲ.

ಸ್ವಾತಂತ್ರ್ಯ ಪದವನ್ನು ಇಲ್ಲಿ ಎರಡು ರೀತಿಯಲ್ಲಿ ಉಪಯೋಗಿಸಬಹುದು. ಒಂದು ವಸ್ತುವಿಗೆ ಮತ್ತೊಂದು ವ್ಯಕ್ತಿಗೆ. ಯಾವುದೇ ಒಂದು ವಸ್ತುವು ಯಾವುದೇ ನಿರ್ಬಂಧಕ್ಕೆ ಒಳಪಡದೆ ಯಾವುದೇ ದಿಕ್ಕಿನಲ್ಲಿ ಚಲಿಸಲು ಸಾಧ್ಯವಾದರೆ ಅದನ್ನು ನಾವು ಸ್ವಾತಂತ್ರ್ಯ ವಸ್ತು ಎನ್ನಬಹುದು. ಅದೇ ವಸ್ತುವಿಗೆ ಯಾವುದೇ ನಿರ್ಬಂಧವಿದ್ದರೆ ಅದು ಸ್ವಾತಂತ್ರ್ಯ ಕಳೆದುಕೊಂಡಿತೆಂದು ಅರ್ಥ. ಇದೇ ರೀತಿ ಯಾವುದೇ ವ್ಯಕ್ತಿಯ ಮೇಲೆ ಕೆಲ ನಿರ್ಬಂಧಗಳನ್ನು ಹೇರಿದಾಗ ಅವನು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಪ್ರಜೆಗಳೆಲ್ಲರೂ ಆಂಗ್ಲರು ಹೇರಿದ್ದ ನಿರ್ಬಂಧಗಳಿಗೆ ಒಳಪಟ್ಟಿದ್ದರು. ನಮ್ಮ ದೇಶವು ಸ್ವತಂತ್ರ ಭೂಮಿಯಾದರೂ ಅದೆಷ್ಟೋ ವ್ಯಕ್ತಿಗಳ ಸ್ವತಂತ್ರ ಇನ್ನೊಬ್ಬರ ಕೈಯಲ್ಲಿರುವುದನ್ನು ನಾವು ಕೂಡ ಕಾಣಬಹುದು. ಅಂದು ಬ್ರಿಟಿಷರ ವಿರುದ್ಧ ಹೋರಾಡಿ ಪಡೆದ ಸ್ವತಂತ್ರ ಇಂದು ನೀಚ ರಾಜಕೀಯದವರ ವಿರುದ್ಧ, ದೇಶ ದ್ರೋಹಿಗಳ ವಿರುದ್ಧ ಹೋರಾಡಿ ನಮ್ಮ ಸ್ವತಂತ್ರ ಪಡೆಯುವಂತ ಸನ್ನಿವೇಶ ಎದುರಾಗಿದೆ. ಜಾತಿ-ಧರ್ಮಗಳ ನಡುವೆ ಕೋಮು ಗಲಭೆ ಸೃಷ್ಟಿಸಿ ನಮ್ಮ ದೇಶಕ್ಕೆ ಕೆಟ್ಟ ಹೆಸರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾನ್ ವ್ಯಕ್ತಿಗಳ ಹೋರಾಟದ ಫಲದಲ್ಲಿ ಬಂದ ಸ್ವತಂತ್ರ ಇಂದು ಕೆಲವೊಂದು ಹುಚ್ಚರ ಸಾಮ್ರಾಜ್ಯದಿಂದಾಗಿ ಸ್ವತಂತ್ರವನ್ನು ಕಳೆದುಕೊಳ್ಳುತ್ತಿದ್ದಾರೆ. 

ಭಾರತ ದೇಶಕ್ಕೆ ಪ್ರತಿದಿನವೂ ಕೂಡ ನೈಜವಾದ ಸ್ವತಂತ್ರ ದೊರೆಯುವಂತೆ ಕಾಪಾಡಿಕೊಳ್ಳಬೇಕು. ಭಾರತ ಸ್ವಾತಂತ್ರ್ಯ ನಾವು ಬರಿ ಸ್ವಾತಂತ್ರ್ಯ ದಿವಸವೆಂದು ಆಚರಿಸಬಾರದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ  ಮಹಾನ್ ದೇಶಭಕ್ತರನ್ನು ನೆನೆಸುತ್ತಾ ಅವರ ತ್ಯಾಗಕ್ಕೆ ಶಿರಬಾಗಿ ಅವರನ್ನು ಸ್ಮರಿಸುತ್ತಾ ನಾವು ಈ ಸ್ವಾತಂತ್ರ್ಯವನ್ನು ಆಚರಿಸಬೇಕು. ಜಾತಿ-ಧರ್ಮಗಳನ್ನು ನೋಡದೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಿ ಬದುಕಲು ಮೊದಲು ಕಲಿಯಬೇಕು. ಒಗ್ಗಟ್ಟಿನಿಂದ ಜೀವಿಸುವುದೆ ನಿಜವಾದ ಸ್ವತಂತ್ರ ಎನ್ನಬಹುದು. ನಾಡಿನ ಸಮಸ್ತ ಜನತೆಗೆ ದೇಶದ 75ನೇ ಸ್ವಾತಂತ್ರ್ತೋತ್ಸವದ ಶುಭಾಶಯಗಳು.......







































  • Blogger Comments
  • Facebook Comments

0 comments:

Post a Comment

Item Reviewed: ಸ್ವಾತಂತ್ರ್ಯದ ಬಗ್ಗೆ ಸ್ವತಂತ್ರವಾಗಿ ತಿಳಿಯಬೇಕು : ಬರೇ ಆಚರಣೆಗೆ ಸೀಮಿತವಾಗದಂತೆ ಎಚ್ಚರ ಅಗತ್ಯ Rating: 5 Reviewed By: karavali Times
Scroll to Top