ಪಾಣೆಮಂಗಳೂರು ಅಯ್ಯಂಗಾರ್ ಬೇಕರಿ ಸಂಪೂರ್ಣವಾಗಿ ಬೆಂಕಿಗಾಹುತಿ : 10ಲಕ್ಷಕ್ಕೂ ಅಧಿಕ ನಷ್ಟ - Karavali Times ಪಾಣೆಮಂಗಳೂರು ಅಯ್ಯಂಗಾರ್ ಬೇಕರಿ ಸಂಪೂರ್ಣವಾಗಿ ಬೆಂಕಿಗಾಹುತಿ : 10ಲಕ್ಷಕ್ಕೂ ಅಧಿಕ ನಷ್ಟ - Karavali Times

728x90

4 June 2022

ಪಾಣೆಮಂಗಳೂರು ಅಯ್ಯಂಗಾರ್ ಬೇಕರಿ ಸಂಪೂರ್ಣವಾಗಿ ಬೆಂಕಿಗಾಹುತಿ : 10ಲಕ್ಷಕ್ಕೂ ಅಧಿಕ ನಷ್ಟ

ಬಂಟ್ವಾಳ, ಜೂನ್ 04, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಪೇಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಹಾಸನ ಜಿಲ್ಲೆಯ  ಬೇಳೂರು ನಿವಾಸಿ ಮಂಜುನಾಥ ನಾಯಕ್ ಅವರ ಮಾಲಕತ್ವದ ಅಯ್ಯಂಗಾರ್ ಬೇಕರಿ ಗುರುವಾರ ಮಧ್ಯರಾತ್ರಿ ಹಠಾತ್ ಬೆಂಕಿಗಾಹುತಿಯಾಗಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮಗೊಂಡಿದೆ. ಅಗ್ನಿ ಅವಘಡದಿಂದ ಅಂಗಡಿಯೊಳಗಿನ ಪೀಠೋಪಕರಣ, ವಿದ್ಯುತ್ ಉಪಕರಣ, ಮಾರಾಟ ವಸ್ತುಗಳೂ ಸೇರಿ ಸರ್ವ ವಸ್ತಗಳೂ ಸಂಪೂರ್ಣ ಸುಟ್ಟು ಭಸ್ಮಗೊಂಡಿದ್ದು, ಯಾವುದೇ ವಸ್ತುವಿನ ಒಂದು ತುಂಡು ಕೂಡಾ ಮಾಲಕರಿಗೆ ಹೆಕ್ಕಿ ತೆಗೆಯಲು ಆಗದ ರೀತಿಯಲ್ಲಿ ಭಸ್ಮಗೊಂಡಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಅಂದಾಜಿಸಲಾಗಿದೆ. 

ಅಂಗಡಿಯ ವಿದ್ಯುತ್ ಸಂಪರ್ಕ, ವಿದ್ಯುತ್ ಪರಿಕರಗಳು, ಅಡುಗೆ ಅನಿಲ ಸಿಲಿಂಡರ್ ಎಲ್ಲವೂ ಸುಸ್ಥಿತಿಯಲ್ಲಿದ್ದು, ಯಾವುದೇ ಆಕಸ್ಮಿಕ ಬೆಂಕಿ ಹೊತ್ತುವ ಸೂಚನೆ ಕಂಡು ಬಾರದೆ ಇದ್ದು, ಬೆಂಕಿ ಅವಘಡದ ಕಾರಣ ನಿಗೂಢವಾಗಿದೆ ಎನ್ನುತ್ತಾರೆ ಅಂಗಡಿ ಮಾಲಕರು ಹಾಗೂ ಸ್ಥಳೀಯ ಸಾರ್ವಜನಿಕರು. 

ಗುರುವಾರ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಅಗ್ನಿ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಸುಮಾರು 3 ಗಂಟೆ ವೇಳೆಗೆ ಬಂಗ್ಲೆಗುಡ್ಡೆಯ ಮನೆಯಲ್ಲಿ ವಾಸವಾಗಿರುವ ಅಂಗಡಿ ಮಾಲಕರಿಗೆ ದುರಂತದ ಮಾಹಿತಿ ಬಂದಿದೆ ಎನ್ನಲಾಗಿದೆ. ಯಾರೋ ಅಂಗಡಿಯೊಳಗೆ ಬೆಂಕಿ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿ ಬಳಿಕ ಅಂಗಡಿ ಮಾಲಕರಿಗೆ, ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ತಕ್ಷಣ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯ ಜ್ವಾಲೆ ನಂದಿಸಲು ಯಶಸ್ವಿಯಾದರಾದರೂ ಅದಾಗಲೇ ಅಂಗಡಿ ಸಂಪೂರ್ಣ ಅಗ್ನಿಗಾಹುತಿಯಾಗಿತ್ತು. ಬೆಂಕಿಯ ಜ್ವಾಲೆ ಸಮೀಪದ ಮೊಬೈಲ್ ಅಂಗಡಿಗೂ ವ್ಯಾಪಿಸಿದ್ದು, ಅಲ್ಲಿನ ಒಂದು ಕಂಪ್ಯೂಟರ್ ಬೆಂಕಿಗೆ ಸುಟ್ಟು ಹೋಗಿದೆ. ಉಳಿದಂತೆ ಹೆಚ್ಚಿನ ಅನಾಹುತ ಸಂಭವಿಸಿಲ್ಲ. 

ಬೇಕರಿ ಇರುವ ಪಕ್ಕದಲ್ಲೇ ಹಲವು ಅಂಗಡಿಗಳಿದ್ದು, ಬೆಂಕಿ ಕೆನ್ನಾಲಗೆ ಇನ್ನಷ್ಟು ವಿಸ್ತರಿಸಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. 

ಕಳೆದ ಎರಡು ವರ್ಷಗಳ ಹಿಂದೆಯಷ್ಟೆ ಅಂದರೆ ಕೊರೋನಾ ಲಾಕ್ ಡೌನ್ ಸಮಯಕ್ಕೆ ಕೊಂಚ ಮುಂಚೆ ಇಲ್ಲಿನ ಅಂಗಡಿಯನ್ನು ಬಾಡಿಗೆ ಪಡೆದು ಮಂಜುನಾಥ ನಾಯಕ್ ಅವರು ಬೇಕರಿ ಆರಂಭಿಸಿದ್ದರು. ಬಳಿಕ ಲಾಕ್ ಡೌನ್ ಸಂಕಷ್ಟ ಎದುರಿಸಿದ ಅವರು ಇತ್ತೀಚೆಗಷ್ಟೆ ಮತ್ತೆ ವ್ಯಾಪಾರ ಮರು ಪ್ರಾರಂಭಿಸಿದ್ದರು. ವ್ಯಾಪಾರ ಚೇತರಿಸುವಷ್ಟರಲ್ಲಿ ಇದೀಗ ನಿಗೂಢ ಭೀಕರ ಅಗ್ನಿ ದುರಂತಕ್ಕೆ ಅಂಗಡಿ ಸಂಪೂರ್ಣ ಭಸ್ಮಗೊಂಡು ಮಾಲಿಕ ಹಾಗೂ ಕುಟುಂಬ ಕಂಗಾಲಾಗಿದೆ. ಅಗ್ನಿ ಅವಘಡದ ಹಿಂದೆ ನಿಗೂಢತೆ ಕಂಡು ಬರುತ್ತಿದ್ದು, ದುಷ್ಕøತ್ಯದ ಸಂಚಿನ ಬಗ್ಗೆ ಸಂಶಯಿಸಿರುವ ಸ್ಥಳೀಯ ಸಾರ್ವಜನಿಕರು ಘಟನೆಯ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. 

ಘಟನೆಯ ಬಗ್ಗೆ ಬೇಕರಿ ಮಾಲಕ ಮಂಜುನಾಥ ನಾಯಕ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ಅಯ್ಯಂಗಾರ್ ಬೇಕರಿ ಸಂಪೂರ್ಣವಾಗಿ ಬೆಂಕಿಗಾಹುತಿ : 10ಲಕ್ಷಕ್ಕೂ ಅಧಿಕ ನಷ್ಟ Rating: 5 Reviewed By: karavali Times
Scroll to Top