ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯ ನೂತನ ಎಸ್ಸೈ ಆಗಿ ನಿಯೋಜನೆಗೊಂಡಿರುವ ರಾಜೇಶ್ ಕೆ ವಿ ಅವರು ಕಳೆದ ಕೆಲ ದಿನಗಳಿಂದ ನಿರಂತರ ಕಾರ್ಯಾಚರಣೆಗಳ ಮೂಲಕ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭರ್ಜರಿ ಬಿಸಿ ಮುಟ್ಟಿಸುತ್ತಿದ್ದಾರೆ.
ಠಾಣಾ ವ್ಯಾಪ್ತಿಯ ವಿವಿಧ ಆಯಕಟ್ಟಿನ ಪ್ರದೇಶಗಳಲ್ಲಿ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ಕೈಗೊಳ್ಳುತ್ತಿರುವ ಎಸ್ಸೈ ರಾಜೇಶ್ ಅವರು ವೀಡಿಯೋ ಚಿತ್ರೀಕರಣ ನಡೆಸುವ ಮೂಲಕ ದಂಡ ವಿಧಿಸುತ್ತಿದ್ದಾರೆ. ವಾಹನ ಸವಾರರು ಹಾಗೂ ಪೊಲೀಸರ ಮಧ್ಯೆ ಯಾವುದೇ ಮಾತುಕತೆ, ವಾಕ್ಸಮರಕ್ಕೆ ಆಸ್ಪದ ಒದಗಿ ಬರಬಾರದು ಎಂಬ ನಿಟ್ಟಿನಲ್ಲಿ ಇಲಾಖಾ ಕ್ಯಾಮೆರಾ ಮೂಲಕವೇ ವೀಡಿಯೋ ಚಿತ್ರೀಕರಣ ನಡೆಸಲಾಗುತ್ತಿದ್ದು, ಉಲ್ಲಂಘಿಸುವ ನಿಯಮಕ್ಕಾಗಿ ಮೋಟಾರು ವಾಹನ ಕಾಯ್ದೆಯಡಿ ಬರುವ ಮೊತ್ತದ ದಂಡ ವಿಧಿಸುವ ಮೂಲಕ ಸೈಲೆಂಟ್ ಕಾರ್ಯಾಚರಣೆಗೆ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ಟ್ರಾಫಿಕ್ ಪೊಲೀಸರು ವಾಹನ ಸವಾರರೊಂದಿಗೆ ತೋರುವ ಅನಚಿತ ವರ್ತನೆ ಹಾಗೂ ವಾಹನ ಸವಾರರು ಪೊಲೀಸರೊಂದಿಗೆ ನಡೆಸುವ ಮಾತಿಕ ಚಕಮಕಿ ವೀಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲೂ ವೈರಲ್ ಆಗಿ ಪೊಲೀಸ್-ನಾಗರಿಕರ ನಡುವೆ ಒಂದು ರೀತಿಯ ಅಂತರ ಸೃಷ್ಟಿಸುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಪ್ರವೃತ್ತರಾಗಿರುವ ಬಂಟ್ವಾಳ ನೂತನ ಟ್ರಾಫಿಕ್ ಎಸ್ಸೈ ರಾಜೇಶ್ ಅವರು ವೀಡಿಯೋ ಕ್ಯಾಮೆರಾ ಮೂಲಕ ಸೈಲೆಂಟ್ ಕಾರ್ಯಾಚರಣೆಗೆ ಇಳಿದಿದ್ದಾರೆ.
ಟ್ರಾಫಿಕ್ ಜಂಜಾಟ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬೇಕು
ಈ ಮಧ್ಯೆ ಟ್ರಾಫಿಕ್ ಪೊಲೀಸರು ಕೇವಲ ವಾಹನ ಸವಾರರಿಗೆ ದಂಡ ವಿಧಿಸಲು ಮಾತ್ರ ಸೀಮಿತವಾಗಬಾರದು. ತಾಲೂಕಿನ ವಿವಿಧ ಪೇಟೆ-ಪಟ್ಟಣಗಳೂ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಟ್ರಾಫಿಕ್ ಕಿರಿಕಿರಿಗೂ ಪರಿಹಾರ ಕಲ್ಪಿಸುವ ಮೂಲಕ ವಾಹನ ಸವಾರರ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
0 comments:
Post a Comment