ರಾಜ್ಯವನ್ನು ಮೋದಿ ನಿರ್ಲಕ್ಷಿಸಿದ ರೀತಿಯಲ್ಲೇ ಜಿಲ್ಲೆಯನ್ನು ಯಡ್ಡಿ ನಿರ್ಲಕ್ಷಿಸಿದ್ದಾರೆ : ಬಜೆಟ್ ಬಗ್ಗೆ ರೈ ಟೀಕೆ - Karavali Times ರಾಜ್ಯವನ್ನು ಮೋದಿ ನಿರ್ಲಕ್ಷಿಸಿದ ರೀತಿಯಲ್ಲೇ ಜಿಲ್ಲೆಯನ್ನು ಯಡ್ಡಿ ನಿರ್ಲಕ್ಷಿಸಿದ್ದಾರೆ : ಬಜೆಟ್ ಬಗ್ಗೆ ರೈ ಟೀಕೆ - Karavali Times

728x90

5 March 2020

ರಾಜ್ಯವನ್ನು ಮೋದಿ ನಿರ್ಲಕ್ಷಿಸಿದ ರೀತಿಯಲ್ಲೇ ಜಿಲ್ಲೆಯನ್ನು ಯಡ್ಡಿ ನಿರ್ಲಕ್ಷಿಸಿದ್ದಾರೆ : ಬಜೆಟ್ ಬಗ್ಗೆ ರೈ ಟೀಕೆ



ಬಂಟ್ವಾಳ (ಕರಾವಳಿ ಟೈಮ್ಸ್) : ಬಿಜೆಪಿಗೆ ಏಳು ಮಂದಿ ಶಾಸಕರನ್ನು ನೀಡಿದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಈ ಬಾರಿಯ ಬಜೆಟ್‍ನಲ್ಲಿ ಏನೇನೂ ಕೊಡುಗೆ ನೀಡುವಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಟೀಕಿಸಿದ್ದಾರೆ.

ಗುರುವಾರ ಯಡಿಯೂರಪ್ಪ ವಿಧಾನಸೌಧದಲ್ಲಿ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಯಿಸಿದ ರೈ ಯಾವುದೇ ವಿಚಾರದಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಬಜೆಟ್‍ನಲ್ಲಿ ಪ್ರಾತಿನಿಧ್ಯವನ್ನೇ ನೀಡಲಾಗಿಲ್ಲ. ಬಹುದೊಡ್ಡ ನಿರೀಕ್ಷೆಯೊಂದಿಗೆ ಜಿಲ್ಲೆಯ ಜನ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ನೆಚ್ಚಿಕೊಂಡಿದ್ದರು. ಆದರೆ ಬಿಜೆಪಿ ಈ ಜಿಲ್ಲೆಯ ಜನತೆಗೆ ಏನೇನೂ ನೀಡದೆ ನಿರಾಸೆಗೊಳಿಸಿದೆ ಎಂದಿದ್ದಾರೆ. ಅತೀ ಹೆಚ್ಚಿನ ಸಂಸದರನ್ನು ಕಳಿಸಿಕೊಟ್ಟರೂ ಪ್ರಧಾನಿ ನರೇಂದ್ರ ಮೋದಿ ರಾಜ್ಯವನ್ನು ನಿರ್ಲಕ್ಷಿಸಿದ ಮಾದರಿಯಲ್ಲೇ ಹೆಚ್ಚಿನ ಶಾಸಕರನ್ನು ಕೊಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಲಕ್ಷಿಸಿದ್ದಾರೆ ಎಂದು ರಮಾನಾಥ ರೈ ಟೀಕಿಸಿದ್ದಾರೆ.

ನಿರಂತರ ದರ ಕುಸಿತ ಮತ್ತು ಮಾರುಕಟ್ಟೆಯಲ್ಲಿನ ಪ್ರತಿಕೂಲ ಪರಿಸ್ಥಿತಿಯಿಂದ ನಷ್ಟದ ಸುಳಿಗೆ ಸಿಲುಕಿ, ಬಿಕ್ಕಟ್ಟಿನಲ್ಲಿರುವ ಜಿಲ್ಲೆಯ ರಬ್ಬರ್ ಬೆಳೆಗಾರರ ನೆರವಿಗೆ ಬಜೆಟ್‍ನಲ್ಲಿ ಪರಿಹಾರ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಈ ಸರ್ಕಾರ ರಬ್ಬರ್ ಬೆಳೆಗಾರರನ್ನು ನಷ್ಟ ಮತ್ತು ಸಾಲದ ಸುಳಿಯಿಂದ ಪಾರು ಮಾಡಲು ರೈತರಿಗೆ ಆರ್ಥಿಕ ನೆರವು ಘೋಷಿಸಬಹುದು ಎಂಬ ಆಶಾಭಾವನೆ ಇತ್ತು. ಆದರೆ, ಮುಖ್ಯಮಂತ್ರಿಯವರು ರಬ್ಬರ್ ಬೆಳೆಗಾರರ ವಿಷಯವನ್ನೇ ಪ್ರಸ್ತಾಪಿಸದೇ ಜಿಲ್ಲೆಯ ಜನರಲ್ಲಿ ದಿಗ್ಭ್ರಮೆ ಉಂಟುಮಾಡಿದ್ದಾರೆ ಎಂದಿದ್ದಾರೆ.

ಅಡಿಕೆ ಮತ್ತು ತೆಂಗು ಬೆಳೆಗಾರರಿಗೂ ವಿಶೇಷ ಯೋಜನೆಗಳನ್ನು ಪ್ರಕಟಿಸಬಹುದು ಎಂಬ ನಿರೀಕ್ಷೆ ಇತ್ತು. ಈ ರೈತರ ಬೇಡಿಕೆಗಳನ್ನು ಬಿಜೆಪಿ ಸರ್ಕಾರ ಕಿಂಚಿತ್ತೂ ಪರಿಗಣಿಸಿಲ್ಲ ಎಂಬುದು ಬಜೆಟ್‍ನಲ್ಲಿ ಎದ್ದು ಕಾಣುತ್ತಿದೆ ಎಂದ ರೈ ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ ಖರೀದಿಗೆ ನೆರವು ನೀಡುವ ತೋರಿಕೆಯ ಘೋಷಣೆಯೊಂದು ಬಿಟ್ಟರೆ ಬಜೆಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಯೋಜನೆಗಳೂ ಕಂಡು ಬರುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ಘೋಷಣೆಗೆ ಸೀಮಿತ. ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಘೋಷಣೆ ಇದೆ, ಆದರೆ ಅನುದಾನವನ್ನೇ ಒದಗಿಸಿಲ್ಲ. ಕುಳಾಯಿ ಬಂದರು ನಿರ್ಮಾಣ ಹಿಂದಿನ ಸರ್ಕಾರದ ಯೋಜನೆ. ಅದನ್ನೇ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ ಎಂದಿದ್ದಾರೆ.

ಉದ್ಯೋಗ ಸೃಷ್ಟಿಗೆ ಪೂರಕವಾದ ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ. ಕೈಗಾರಿಕಾ ಅಭಿವೃದ್ಧಿಗೂ ಒತ್ತು ನೀಡಿಲ್ಲ. ಆರ್ಥಿಕ ಕುಸಿತದಿಂದ ಸಂಕಷ್ಟದಲ್ಲಿರುವ ಜನರಿಗೆ  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಹೊರೆ ಹೇರಿರುವುದು ಖಂಡನೀಯ ಎಂದ ರೈ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ನೆರವಿಗಾಗಿ ಜಾರಿಯಲ್ಲಿದ್ದ ಕೆಲವು ಕಾರ್ಯಕ್ರಮಗಳ ಅನುದಾನ ಕಡಿತಗೊಳಿಸಿರುವುದು ಸರಿಯಲ್ಲ. ಇದು ನಿರ್ದಿಷ್ಟ ಗುರಿ ಇಲ್ಲದ ಮತ್ತು ವಾಸ್ತವಿಕ ಸ್ಥಿತಿಗೆ ಪೂರಕವಲ್ಲದ ಒಂದು ನಿರಾಶಾದಾಯಕ ಬಜೆಟ್ ಎಂದು ರಮಾನಾಥ ರೈ ಟೀಕಾಪ್ರಹಾರಗೈದಿದ್ದಾರೆ.











  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯವನ್ನು ಮೋದಿ ನಿರ್ಲಕ್ಷಿಸಿದ ರೀತಿಯಲ್ಲೇ ಜಿಲ್ಲೆಯನ್ನು ಯಡ್ಡಿ ನಿರ್ಲಕ್ಷಿಸಿದ್ದಾರೆ : ಬಜೆಟ್ ಬಗ್ಗೆ ರೈ ಟೀಕೆ Rating: 5 Reviewed By: karavali Times
Scroll to Top