ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಹಾಮಾರಿ ಕೋವಿಡ್-19 ತನ್ನ ವಿಷಮ ಪರಿಸ್ಥಿತಿಯನ್ನು ಸಾಬೀತುಪಡಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಜನರ ರಸ್ತೆ ಸಂಚಾರ ಹಾಗೂ ಆಟೋಟಗಳಿಗೆ ಸ್ವಯಂ ಕಡಿವಾಣ ದೊರೆಯದಿದ್ದಲ್ಲಿ ಸ್ವತಃ ಇಲಾಖಾಧಿಕಾರಿಗಳೇ ಈ ಬಗ್ಗೆ ಕಠಿನ ಕ್ರಮ ಜರುಗಿಸುವುದು ಅನಿವಾರ್ಯ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದರೂ ಜನ ಅದರಲ್ಲೂ ಯುವಕರು ಇನ್ನೂ ಮೋಜು-ಮಸ್ತಿ, ತಮಾಷೆಯಲ್ಲೇ ಕಳೆಯುತ್ತಿರುವುದು ಆತಂಕವನ್ನುಂಟುಮಾಡುತ್ತಿದೆ. ನಗರ ಪ್ರದೇಶಗಳಲ್ಲಿ ಪೊಲೀಸ್, ಆರೋಗ್ಯ ಹಾಗೂ ಕಂದಾಯ ಇಲಾಖಾಧಿಕಾರಿಗಳ ಗಸ್ತು, ಕ್ರಮ ಕಟ್ಟುನಿಟ್ಟಾಗಿರುವ ಹಿನ್ನಲೆಯಲ್ಲಿ ಯುವಕರ ಪಡೆದ ಗ್ರಾಮೀಣ ಪ್ರದೇಶ ಹಾಗೂ ಹಳ್ಳಿ ಪ್ರದೇಶಗಳತ್ತ ಗುಳೇ ಹೊರಟು ಅಲ್ಲಿನ ಗದ್ದೆ, ಮೈದಾನಗಳಲ್ಲಿ ವಿವಿಧ ಮನೋರಂಜನಾ ಆಟೋಟಗಳಲ್ಲಿ ತೊಡಗಿಸಿಕೊಳ್ಳುವುದು, ನದಿ-ತೋಡುಗಳಲ್ಲಿ ನೀರಾಟ ಆಡುವುದು ಸೇರಿದಂತೆ ಮಜಾ ಉಡಾಯಿಸುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಇಂತಹ ಮೋಜಿನಿಂದ ನದಿ ನೀರಿನ ಸೆಳೆತಕ್ಕೆ ಸಿಲುಕಿ ಜೀವ ಹಾನಿಯಾಗಿರುವ ಘಟನೆಗೂ ವರದಿಯಾಗಿವೆ.
ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಪೇಟೆ-ಪಟ್ಟಣಗಳನ್ನು ಮೀರಿ ಗ್ರಾಮಾಂತರ ಹಾಗೂ ಹಳ್ಳಿ ಪ್ರದೇಶಗಳಿಗೂ ತಮ್ಮ ಗಸ್ತನ್ನು ಹೆಚ್ಚಿಸಬೇಕಾಗಿದೆ. ಅಲ್ಲಿನ ಪ್ರದೇಶಗಳಲ್ಲಿ ಒಟ್ಟು ಸೇರುವ ಯುವಕರ ಗುಂಪನ್ನು ನಿಯಂತ್ರಿಸುವ ಮೂಲಕ ಹಳ್ಳಿ ಪ್ರದೇಶದ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಆಗ್ರಹಗಳು ಕೇಳಿ ಬರುತ್ತಿದೆ. ಅಲ್ಲದೆ ರಸ್ತೆಗಳಲ್ಲಿ ಬೇಕಾಬಿಟ್ಟಿ ಮಕ್ಕಳು ಹಾಗೂ ಯುವಕರು ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವ ಮೂಲಕ ವ್ಯವಸ್ಥೆಗೇ ಸವಾಲಾಗುತ್ತಿದ್ದಾರೆ. ಅದರಲ್ಲೂ ಚಾಲನಾ ಪರವಾನಿಗೆಯೂ ಇಲ್ಲದ ಅಪ್ರಾಪ್ತ ಮಕ್ಕಳ ಬೈಕ್ ಸಾಹಸಗಳೂ ಆತಂಕ ಸೃಷ್ಟಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಬೆತ್ತ ಪ್ರಯೋಗಿಸುವ ಬದಲಾಗಿ ಇಂತಹ ಯುವಕರನ್ನು ವಾಹನ ಸಹಿತ ಬಂಧಿಸಿ ಲಾಕ್ ಡೌನ್ ಅವಧಿ ಮುಗಿಯುವವರೆಗೂ ಬಂಧನದಲ್ಲಿಡಬೇಕಾಗಿದೆ. ಅಲ್ಲದೆ ವಶಪಡಿಸಿಕೊಂಡ ವಾಹನಗಳನ್ನೂ ರಿಲೀಸ್ ಮಾಡಕೂಡದು. ಪೊಲೀಸ್ ಠಾಣೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟ ಸಾಧ್ಯವಾದರೆ ಬಂದ್ ಆಗಿರುವ ಶಾಲಾ-ಕಾಲೇಜುಗಳನ್ನಾದರೂ ಪಡೆದುಕೊಂಡು ಬಂಧನ ಕೇಂದ್ರವನ್ನಾಗಿಸಿ ಜನರ ಆರೋಗ್ಯದ ಕಡೆ ಗಮನ ಹರಿಸಬೇಕಾದ ಕೆಲಸವನ್ನು ಅಧಿಕಾರಿಗಳು ಮಾಡಲೇಬೇಕಾಗಿದೆ. ಬಲಪ್ರಯೋಗದ ಬದಲಾಗಿ ಇಂತಹ ನಿಷ್ಠುರ ಕ್ರಮ ಕೈಗೊಂಡಾಗ ಜನ ತನ್ನಿಂತಾನೆ ನಿಯಂತ್ರಣಕ್ಕೆ ಬರುತ್ತಾರೆ ಎಂಬುದು ಗ್ರಾಮೀಣ ಪ್ರದೇಶದ ಜನರ ಅಭಿಪ್ರಾಯವಾಗಿದೆ.
ಇಂದು (ಮಾ 28) ದಕ್ಷಿಣ ಕನ್ನಡ ಸಂಪೂರ್ಣ ಬಂದ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಎರಡು ಕೋವಿಡ್-19 ಪ್ರಕರಣಗಳು ದೃಢಪಟ್ಟಿರುವ ಹಾಗೂ ನೆರೆಯ ಕಾಸರಗೋಡಿನಲ್ಲಿ ಶಂಕಿತ ಪ್ರಕರಣಗಳೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ತುರ್ತು ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶನಿವಾರ (ಮಾ 28) ಜಿಲ್ಲೆ ಸಂಪೂರ್ಣ ಬಂದ್‍ಗೆ ಆದೇಶ ನೀಡಿದ್ದಾರೆ.
ಸಚಿವ ಕೋಟಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ದೀರ್ಘ ಚರ್ಚೆಯ ಬಳಿಕ ಸಚಿವರು ಈ ಸಂಪೂರ್ಣ ಬಂದ್ ನಿರ್ಧಾರ ಪ್ರಕಟಿಸಿದ್ದಾರೆ. ಶನಿವಾರ ಜಿಲ್ಲೆಯ ಯಾವುದೇ ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆಯುವಂತಿಲ್ಲ. ಕಫ್ರ್ಯೂ ರಿಯಾಯಿತಿ ಅವಧಿಯನ್ನು ವಾಪಾಸು ಪಡೆಯಲಾಗಿದೆ. ರಸ್ತೆಯಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ನಿರಕಾರಿಸಲಾಗಿದ್ದು, ಒಂದು ದಿನ ಜನ ಎಲ್ಲವನ್ನೂ ಸುಧಾರಿಸಿಕೊಂಡು ಹೋಗಬೇಕಿದೆ.
ಈಗಾಗಲೇ ರಾಜ್ಯದಲ್ಲಿ 64 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಶುಕ್ರವಾರ ಒಂದೇ ದಿನ 9 ಪ್ರಕರಣ ಕರ್ನಾಟಕದಲ್ಲಿ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 7 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಈ ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ಮೆಡಿಕಲ್ ಸ್ಟೋರ್, ಆಸ್ಪತ್ರೆ ಸೇವೆ ಹಾಗೂ ಅಂಬುಲೆನ್ಸ್ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸಂಪೂರ್ಣವಾಗಿ ಜಿಲ್ಲಾದ್ಯಂತ ಶನಿವಾರ ಸ್ಥಗಿತಗೊಳಿಸಲಾಗುತ್ತಿದೆ.
0 comments:
Post a Comment