ಬಂಟ್ವಾಳ (ಕರಾವಳಿ ಟೈಮ್ಸ್) : ವ್ಯಾಪಾರ ಪರವಾನಿಗೆ ಹೊಂದಿದ ದಿನಸಿ ಅಂಗಡಿ ಮಾಲಕರು ಬಾಗಿಲು ತೆರೆದು ಜನಸಾಮಾನ್ಯರಿಗೆ ಸಾಮಾನ್ಯ ದರದಲ್ಲಿ ಅಗತ್ಯ ಸಾಮಾಗ್ರಿಗಳನ್ನು ಪೂರೈಸದಿದ್ದಲ್ಲಿ ಅಂತಹ ಅಂಗಡಿ ಮಾಲಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.
ಸೋಮವಾರ ಬಿ ಸಿ ರೋಡಿನಲ್ಲಿರುವ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರ ಶಾಸಕರ ಕಛೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾರ್ಚ್ 31 ರಂದು ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ ಮೂರರವರೆಗೆ ಜಿಲ್ಲೆಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಈ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದಿನಸಿ ಅಂಗಡಿ ಮಾಲಕರು ಸಾರ್ವಜನಿಕರಿಗೆ ಆಹಾರ ಸಾಮ್ರಗಿಗಳನ್ನು ಪೂರೈಸಬೇಕು. ಈ ಬಗ್ಗೆ ಉಸ್ತುವಾರಿಯನ್ನು ಗ್ರಾ ಪಂ ಪಿಡಿಒಗಳಿಗೆ ಹಾಗೂ ಪುರಸಭಾ, ಪಟ್ಟಣ ಪಂಚಾಯತ್‍ಗಳ ಮುಖ್ಯಾಧಿಕಾರಿಗಳಿಗೆ ವಹಿಸಲಾಗಿದ್ದು, ಅವರು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದರು.
ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿಯೂ ಟಾಸ್ಕ್ ಫೆÇೀರ್ಸ್ ಸಮಿತಿ ರಚಿಸಲಾಗಿದ್ದು, ಜಾಗೃತಿ ಕಾರ್ಯ ನಡೆಯುತ್ತಿದೆ. ದಿನಕೂಲಿ ನೌಕರರು, ವಲಸೆ ಕಾರ್ಮಿಕರು ಹಾಗೂ ಭಿಕ್ಷುಕರಿಗೆ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳ ಮೂಲಕ ಆಹಾರ ಪೂರೈಸಲಾಗುತ್ತಿದ್ದು, ಅಗತ್ಯ ಬಿದ್ದರೆ ಕಲ್ಯಾಣ ಮಂಟಪಗಳಲ್ಲಿ ಅವರಿಗೆ ವಾಸ್ತವ್ಯ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದ ಸಚಿವ ಕೋಟ ಪೂಜಾರಿ ಗರ್ಭಿಣಿಯರು ಹಾಗೂ ಬಾಣಂತಿರಿಗೆ ನೀಡುವ ಪೌಷ್ಠಿಕ ಆಹಾರಗಳನ್ನು ಅಂಗನವಾಡಿ ಶಿಕ್ಷಕಿಯರ ಮೂಲಕ ಅವರ ಮನೆಗಳಿಗೆ ತಲುಪಿಸಲಾಗುವುದು. ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದ ಸಾಮಾಗ್ರಿಗಳನ್ನು ಮಕ್ಕಳ ಪೋಷಕರನ್ನು ಶಾಲೆಗೆ ಕರೆದು ಸಾಮಾಜಿಕ ಅಂತರ ಕಾಯ್ದುಕೊಂಡು ನೀಡಲಾಗುವುದು ಅಥವಾ ಶಾಲೆಯ ಹತ್ತಿರದ ಶಿಕ್ಷಕರನ್ನು ಕರೆದು ಮಕ್ಕಳ ಮನೆಗೆ ತಲುಪಿಸುವ ಕಾರ್ಯಕ್ರಮ ಹಾಕಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದು ಸಚಿವರು ಹೇಳಿದರು.
ಸಜಿಪನಡು ಗ್ರಾಮದ ಪ್ರತಿ ಮನೆಗೂ ಆಹಾರ
ಕೊರೋನಾ ವೈರಸ್ ಮಗುವಿನ ಮೂಲಕ ದೃಢಪಟ್ಟು ಸಂಪೂರ್ಣ ಕ್ವಾರಂಟೈನ್ ಆಗಿರುವ ಸಜಿಪನಡು ಗ್ರಾಮದ ಪ್ರತಿ ಮನೆಗಳಿಗೂ ದಿನಸಿ ಹಾಗೂ ಆಹಾರ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯವನ್ನು ಜಿಲ್ಲಾಡಳಿತ ಗ್ರಾಮ ಪಂಚಾಯತ್ ಟಾಸ್ಕ್‍ಫೆÇೀರ್ಸ್ ಸಮಿತಿಯ ಮೂಲಕ ಮಾಡುತ್ತದೆ ಎಂದ ಸಚಿವ ಕೋಟ ಮಗುವಿನ ತಾಯಿ ಕೇರಳ ಗಡಿಭಾಗವಾಗಿರುವ ಮಂಜನಾಡಿ ನಿವಾಸಿ ಆಗಿರುವುದರಿಂದ ಆ ಮೂಲಕ ಸಜಿಪಕ್ಕೆ ಕೋರೋನಾ ವೈರಸ್ ಸೋಂಕಿರುವ ಸಾಧ್ಯತೆ ಇದ್ದು, ಈ ಕಾರಣಕ್ಕಾಗಿ ಡೀ ಗ್ರಾಮದ ಮೇಲೆ ಜಿಲ್ಲಾಡಳಿತ ಕಣ್ಗಾವಲು ವ್ಯವಸ್ಥೆ ಮಾಡಿದೆ. ಗ್ರಾಮದ 918 ಮನೆಗಳ ಮೇಲೂ ನಿಗಾ ಇಡಲಾಗಿದೆ. ಗ್ರಾಮದ ಪ್ರತಿಯೊಬ್ಬರ ಆರೋಗ್ಯವನ್ನೂ ಆರೋಗ್ಯ ಇಲಾಖೆ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ ಎಂದರು.
ಕೃಷಿ ಚಟುವಟಿಕೆಗಳನ್ನು ನಡೆಸುವ ರೈತರಿಗೆ ತೊಂದರೆ ಆಗದಂತೆ ಅವರಿಗೆ ಮಂಗಳೂರು ಸಹಾಯಕ ಆಯುಕ್ತರ ಮೂಲಕ ಗುರುತು ಚೀಟಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದ್ದು, ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು ಕಫ್ರ್ಯೂ ಸಡಿಲಿಕೆ ದಿನಸಿ ಅಂಗಡಿಗಳಿಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಸಕಾರಣವಿಲ್ಲದೆ ವಿನಾ ಕಾರಣ ತಿರುಗಾಟ ನಡೆಸುವುದು ಕಂಡು ಬಂದರೆ ಅಂತಹವರ ವಿರುದ್ದ ಕಠಿಣ ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರಧಾನಿಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅನಿವಾರ್ಯತೆ ಎದುರಾಗಿದ್ದು, ಕಷ್ಟ ಆದರೂ ಅಸ್ತಿತ್ವದ ದೃಷ್ಟಿಯಿಂದ ಸಹಿಷ್ಟುತಾ ಭಾವದಿಂದ ಜನತೆ ನಿಭಾಯಿಸಬೇಕು ಎಂದು ಕೋರಿದ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ನಮ್ಮ ಮುಂದಿರುವ ಏಕೈಕ ದಾರಿ. ಅದನ್ನು ಮಾಡಲೇಬೇಕಿದೆ ಎಂದರು.
ಲಕ್ಷ್ಮಣ ರೇಖೆ ಕಾಯ್ದುಕೊಂಡರೆ ವೈರಸ್ ದೂರ : ಶಾಸಕ ನಾಯಕ್
ಇದೇ ವೇಳೆ ಮಾತನಾಡಿದ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್, ಪ್ರಧಾನಿಗಳು ಮಾರಕ ವೈರಸ್ ದೂರ ಮಾಡಲು ಸರಳ ಉಪಾಯ ಕಂಡುಕೊಂಡಿದ್ದು, ಲಕ್ಷ್ಮಣ ರೇಖೆ ಸಿದ್ದಾಂತವನ್ನು ಜನತೆಗೆ ತೋರಿದ್ದಾರೆ. ನಾವು ನಮ್ಮ ಲಕ್ಷ್ಮಣ ರೇಖೆಯನ್ನು ಮೀರದಿದ್ದರೆ ವೈರಸ್ ಕೂಡಾ ನಮ್ಮ ರೇಖೆಯೊಳಗೆ ಪ್ರವೇಶಿಸುವುದಿಲ್ಲ. ಹೀಗಾದಾಗ ವೈರಸ್ ನಿಯಂತ್ರಣ ಸಾಧ್ಯ ಎಂದರಲ್ಲದೆ ಜನ ಮನೆಯಲ್ಲಿದ್ದುಕೊಳ್ಳುವುದೇ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಬಿ.ಪಿ.ಎಲ್. ಅಲ್ಲದ ಅನಿವಾರ್ಯತೆ ಇರುವ ಕುಟುಂಬಗಳನ್ನೂ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಅಂತಹವರಿಗೂ ಆಹಾರ ಕಿಟ್ ಒದಗಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment