ದಕ್ಷಿಣ ಕನ್ನಡದಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಕಠಿಣ ಕ್ರಮ : ಉಸ್ತುವಾರಿ ಸಚಿವರ ಎಚ್ಚರಿಕೆ - Karavali Times ದಕ್ಷಿಣ ಕನ್ನಡದಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಕಠಿಣ ಕ್ರಮ : ಉಸ್ತುವಾರಿ ಸಚಿವರ ಎಚ್ಚರಿಕೆ - Karavali Times

728x90

26 April 2020

ದಕ್ಷಿಣ ಕನ್ನಡದಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಕಠಿಣ ಕ್ರಮ : ಉಸ್ತುವಾರಿ ಸಚಿವರ ಎಚ್ಚರಿಕೆಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಬರಬೇಕು. ತಪ್ಪಿದಲ್ಲಿ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.

ಬಂಟ್ವಾಳ ಪೇಟೆ ಹಾಗೂ ನರಿಕೊಂಬು ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ಸಚಿವರು ಹಾಗೂ ಸಂಸದರು ಬಂಟ್ವಾಳ ಐಬಿಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ತುರ್ತು ಸಭೆಯಲ್ಲಿ ಸಚಿವ ಕೋಟ ಪೂಜಾರಿ ಈ ಎಚ್ಚರಿಕೆ ನೀಡಿದ್ದಾರೆ.

ಬಂಟ್ವಾಳದಲ್ಲಿ  ಮೇ 3ರವರೆಗೆ ಲಾಕ್‍ಡೌನ್‍ನಲ್ಲಿ ಯಾವುದೇ ವಿನಾಯಿತಿ ಇಲ್ಲ. ಬಂಟ್ವಾಳ ಪೇಟೆಯ 92 ಮನೆಗಳು ಹಾಗೂ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ 213 ಮನೆಗಳಲ್ಲಿ ಪ್ರತಿನಿತ್ಯ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿ ವರದಿ ನೀಡಬೇಕು. ಬಂಟ್ವಾಳ ಪುರಸಭಾ ವ್ಯಾಪ್ತಿ ಹಾಗೂ ನರಿಕೊಂಬು ಗ್ರಾ ಪಂ ವ್ಯಾಪ್ತಿಯಲ್ಲಿ ಲಾಕ್‍ಡೌನ್‍ನಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸಚಿವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 19 ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಇಬ್ಬರು ಮೃತಪಟ್ಟಿದ್ದು,  12 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ ಪ್ರಕರಣಗಳಲ್ಲಿ ನಿಗಾವಹಿಸಲಾಗಿದೆ ಎಂದ ಸಚಿವ ಕೋಟ ಫಸ್ಟ್ ನ್ಯೂರೋ ಆಸ್ಪತ್ರೆಯ 198  ಸಿಬ್ಬಂದಿ ಹಾಗೂ ಇನ್ನಿತರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ 49 ಪ್ರಕರಣಗಳ ವರದಿ ಬಂದಿದ್ದು, 48 ನೆಗೆಟಿವ್, ಒಂದು ಪಾಸಿಟಿವ್ ಆಗಿರುತ್ತದೆ.

ಜಿಲ್ಲಾಡಳಿತದ ಪೂರ್ಣ ಕಣ್ಗಾವಲಿನಲ್ಲಿ ಕೊರೋನ ನಿಯಂತ್ರಣ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ  ಕಾರಣಕ್ಕೂ ಪರಿಸ್ಥಿತಿಯನ್ನು ಲಘುವಾಗಿ ಪರಿಗಣಿಸದೆ ಸ್ವಯಂ ಕಫ್ರ್ಯೂಗೆ ತಮ್ಮನ್ನು ತಾವು ಒಳಪಡಿಸಿಕೊಳ್ಳಬೇಕು. ತಪ್ಪಿದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬಂಟ್ವಾಳ ಕಸಬಾ ಹಾಗೂ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿ ಸೀಲ್‍ಡೌನ್ ಮಾಡಿ, ವಿಶೇಷ ಅಧಿಕಾರಿಗಳನ್ನು ನೇಮಕಗೊಳಿಸಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ದೂರವಾಣಿ ಸಂಪರ್ಕ ನೀಡಲಾಗಿದೆ. 11 ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ಹಗಲು-ರಾತ್ರಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿದ್ದುಕೊಂಡು ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಳ್ಳಬಹುದು ಎಂದರು.

ಅಂತೆಯೇ ದಿನಸಿ ಸಾಮಗ್ರಿ, ಹಾಲು ದಿನಪತ್ರಿಕೆ, ಔಷಧಿ, ಊಟೋಪಚಾರ ತರಕಾರಿ, ಹಣ್ಣು, ಮಾಂಸಗಳನ್ನು ಸಾರ್ವಜನಿಕರ ಬೇಡಿಕೆಯಂತೆ ಒದಗಿಸಲು ಹಾಗೂ ಬ್ಯಾಂಕಿಂಗ್ ಸೇವೆ, ಗ್ಯಾಸ್ ಇನ್ನಿತರ ತುರ್ತು ಸೇವೆಗಳನ್ನು ಒದಗಿಸಲು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ  ಎಂದು ಸಚಿವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಅಧಿಕಾರಿಗಳು ಮಾರ್ಗಸೂಚಿಗಳನ್ನು ಸರಿಯಾಗಿ ಜಾರಿಗೆ ತಂದು, ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕು, ವಲಸೆ ಕಾರ್ಮಿಕರು ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ  ನೀಡಬೇಕು. ಆಹಾರ ಪೂರೈಕೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು. 
  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡದಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಕಠಿಣ ಕ್ರಮ : ಉಸ್ತುವಾರಿ ಸಚಿವರ ಎಚ್ಚರಿಕೆ Rating: 5 Reviewed By: karavali Times
Scroll to Top