ಮುಂಬೈ (ಕರಾವಳಿ ಟೈಮ್ಸ್) : ಎಪ್ರಿಲ್ 5 ರಂದು ಮನೆಯಲ್ಲಿ ದೀಪ ಬೆಳಗಿಸಿ ಎಂದು ಮೋದಿ ಅವರು ಕೊಟ್ಟಿರುವ ಕರೆಗೆ ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ದೇಶದ ಜನರಿಗಾಗಿ ವಿಡಿಯೋ ಸಂದೇಶವನ್ನು ನೀಡಿದ್ದ ಮೋದಿ, ಎಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಎಲ್ಲರೂ ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಎಂದು ಸಂದೇಶ ನೀಡಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಂಜಯ್ ರಾವತ್, ದೀಪ ಬೆಳಗಿಸುವ ವೇಳೆ ಜನರು ಅವರ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಜನತಾ ಕರ್ಫ್ಯೂ ದಿನ ಮೋದಿ ಅವರು ಚಪ್ಪಾಳೆ ತಟ್ಟಲು ಜನರಿಗೆ ಹೇಳಿದ್ದರು. ಆದರೆ ಕೆಲ ಜನ ಮಾತ್ರ ರಸ್ತೆಗಳಲ್ಲಿ ಕಿಕ್ಕಿರಿದು ಡ್ರಮ್‍ಗಳನ್ನು ಭಾರಿಸಿದ್ದರು. ಈಗ ಅವರು ತಮ್ಮ ಸ್ವಂತ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಸರ್ ದೀಪಗಳನ್ನು ಬೆಳಗಿಸಿ ಆದರೆ ದಯವಿಟ್ಟು ಕೊರೊನಾ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಏನು ಮಾಡುತ್ತಿದೆ ಎಂದು ನಮಗೆ ತಿಳಿಸಿ ಎಂದು ಸಂಸದ ರಾವತ್ ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಜನಸಾಮಾನ್ಯರನ್ನು ತಮ್ಮ ಮನೆಯ ಬಾಲ್ಕನಿಗಳಿಗೆ ಬಂದು ಚಪ್ಪಾಳೆ ತಟ್ಟುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮತ್ತು ವೈದ್ಯರಿಗೆ ಗೌರವ ಸಲ್ಲಿಸಲು ಹೇಳಿದ್ದರು. ಆದರೆ ಕೆಲವು ಕಡೆ ಜನರು ರಸ್ತೆಗೆ ಇಳಿದು ದೊಡ್ಡ ಮಟ್ಟದಲ್ಲಿ ಗುಂಪು ಸೇರಿ ಚಪ್ಪಾಳೆ ಮತ್ತೆ ಪಾತ್ರೆಗಳಿಂದ ಶಬ್ದ ಮಾಡಿದ್ದರು.
ಈಗ ಎಪ್ರಿಲ್ 3 ರಂದು ವಿಡಿಯೋ ಸಂದೇಶ ಕಳುಹಿಸಿರುವ ಮೋದಿ, ಎಪ್ರಿಲ್ 5 ರಂದು ಎಲ್ಲರೂ ಒಟ್ಟಾಗೋಣ. ಎಪ್ರಿಲ್ 5 ರಂದು ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಎಲ್ಲರೂ ಒಗ್ಗಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಕರೆಕೊಟ್ಟಿದ್ದರು.
0 comments:
Post a Comment