ಬೆಂಗಳೂರು (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತ್ ಚುನಾವಣೆಯನ್ನು ನಿಗದಿತ ಅವಧಿಯಲ್ಲೇ ನಡೆಸುವಂತೆ ಕಾಂಗ್ರೆಸ್ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಚುನಾವಣಾ ಆಯುಕ್ತರನ್ನು ಖುದ್ದು ಭೇಟಿಮಾಡಿದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ, ಗ್ರಾಮ ಪಂಚಾಯತಿಗಳ ಅಧಿಕಾರಾವಧಿಯು ಮುಕ್ತಾಯಗೊಳ್ಳುತ್ತಿದ್ದರೂ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತ್‍ಗಳ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಕ್ರಿಯೆಯನ್ನು ಭಾರತೀಯ ಸಂವಿಧಾನ 1950 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್‍ರಾಜ್ ಕಾಯ್ದೆ 1993ರ ಆಶಯದಂತೆ ಆರಂಭಿಸಿಲ್ಲದಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಆಕ್ಷೇಪಿಸಿದ್ದಾರೆ.
ರಾಜ್ಯದ ಗ್ರಾಮ ಪಂಚಾಯತ್‍ಗಳಿಗೆ ನಡೆಯಬೇಕಾದ ಚುನಾವಣಾ ಪ್ರಕ್ರಿಯೆ ಮೇಲಿನ ಮೇಲ್ವಿಚಾರಣೆ, ಮತದಾರರ ಪಟ್ಟಿ ತಯಾರಿಸುವಿಕೆ ಮತ್ತು ನಿಯಂತ್ರಣಗಳನ್ನು ರಾಜ್ಯ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಗೆ ನೀಡಲಾಗಿದೆ. ಸಂವಿಧಾನದ 243ಇ ವಿಧಿಯಂತೆ ಗ್ರಾಮ ಪಂಚಾಯತಿಯೊಂದು ಮೊದಲ ಸಭೆ ನಡೆಸಿದ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಅಧಿಕಾರ ಹೊಂದಿದೆ.
ಅದರಂತೆ 2015ನೇ ಇಸವಿಯಲ್ಲಿ ನಮ್ಮ ರಾಜ್ಯದ 6024 ಗ್ರಾಮ ಪಂಚಾಯತಿಗಳ ಸದಸ್ಯರ ಸ್ಥಾನಗಳಿಗಾಗಿ ಚುನಾವಣೆ ನಡೆದಿದೆ. ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರಾವಧಿಯು ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ.
ಆದ್ದರಿಂದ ಸಂವಿಧಾನದ 73 ನೇ ತಿದ್ದುಪಡಿಯ ಉದ್ದೇಶಕ್ಕೆ ವಿರುದ್ಧವಾಗಿ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸದೆ ಇರುವುದರಿಂದ ಗ್ರಾಮಗಳ ವಿಕೇಂದ್ರೀಕೃತ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73ನೇ ತಿದ್ದುಪಡಿಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.
0 comments:
Post a Comment