ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ ಎಂದು ಸಾರಿದ ಹೈಕೋರ್ಟ್ : ಬಿಜೆಪಿ ಸರಕಾರಕ್ಕೆ ಭಾರೀ ಮುಖಭಂಗ - Karavali Times ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ ಎಂದು ಸಾರಿದ ಹೈಕೋರ್ಟ್ : ಬಿಜೆಪಿ ಸರಕಾರಕ್ಕೆ ಭಾರೀ ಮುಖಭಂಗ - Karavali Times

728x90

12 May 2020

ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ ಎಂದು ಸಾರಿದ ಹೈಕೋರ್ಟ್ : ಬಿಜೆಪಿ ಸರಕಾರಕ್ಕೆ ಭಾರೀ ಮುಖಭಂಗಮತ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂದ ಹೈ ಕೋರ್ಟ್
ಅಹಮದಾಬಾದ್ (ಕರಾವಳಿ ಟೈಮ್ಸ್) : ಗುಜರಾತ್ ನಲ್ಲಿರುವ ಬಿಜೆಪಿ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದ್ದು, ಸಚಿವರಾಗಿರುವ ಭೂಪೇಂದ್ರ ಸಿಂಹ ಚೂಡಾಸಮಾ ಅವರ ಚುನಾವಣಾ ಗೆಲುವನ್ನು ಹೈಕೋರ್ಟ್ ರದ್ದುಗೊಳಿಸಿದೆ.
2017ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಭೂಪೇಂದ್ರ ಸಿಂಹ ಚೂಡಾಸಮಾ ಗೆದ್ದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾ. ಪರೇಶ್ ಉಪಾಧ್ಯಾಯ ನೇತೃತ್ವದ ಪೀಠ ಮತ ಎಣಿಕೆಯ ವೇಳೆ ಅಕ್ರಮ ನಡೆದಿದೆ ಎಂದು ಅಭಿಪ್ರಾಯಪಟ್ಟು ಗೆಲುವನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭೂಪೇಂದ್ರ ಸಿಂಹ ಚೂಡಾಸಮಾ ಅವರಿಗೆ ಶಿಕ್ಷಣ, ಕಾನೂನು ಮತ್ತು ನ್ಯಾಯ, ಶಾಸಕಾಂಗ ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಆದರೆ ಈಗ ಚೂಡಾಸಮಾ  ಅವರ ಗೆಲುವನ್ನು ರದ್ದುಗೊಳಿಸುವ ಮೂಲಕ  ವಿಜಯ್ ರೂಪಾನಿ ಸರ್ಕಾರಕ್ಕೆ ಮುಖಭಂಗವಾಗಿದೆ.
ಏನಿದು ಪ್ರಕರಣ?
2017ರ ಚುನಾವಣೆಯಲ್ಲಿ ದೋಲ್ಕಾ ವಿಧಾನಸಭಾ ಕ್ಷೇತ್ರದಿಂದ ಕೇವಲ ಭೂಪೇಂದ್ರ ಸಿಂಹ ಚೂಡಾಸಮಾ ಗೆದ್ದಿದ್ದರು. ಕೇವಲ 327 ಮತಗಳಿಂದ ಗೆದ್ದಿದ್ದ ಇವರ ಮೇಲೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಥೋಡ್ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಮತ ಎಣಿಕೆಯ ವೇಳೆ ರಿಟರ್ನಿಂಗ್ ಆಫೀಸರ್ ಅಕ್ರಮವಾಗಿ 429 ಅಂಚೆ ಮತಗಳನ್ನ ಎಣಿಕೆ ನಡೆಸದೇ ತಿರಸ್ಕೃತಗೊಳಿಸಿದ್ದಾರೆ. ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ನಡೆಸಲಾಗಿದೆ. ಒಟ್ಟು 1,59,946 ಮಂದಿ ಮತ ಹಾಕಿದ್ದರೆ, ಚುನಾವಣಾಧಿಕಾರಿ 1,59,917 ಮತಗಳನ್ನು ಮಾತ್ರ ಪರಿಗಣಿಸಿ ಫಲಿತಾಂಶ ಪ್ರಕಟಿಸಿದ್ದಾರೆ. 29 ಮತಗಳನ್ನು ಎಣಿಕೆಗೆ ಪರಿಗಣಿಸಿಲ್ಲ. ಮತ ಎಣಿಕಾ ಅಧಿಕಾರಿ ಮೇಲೆ ಚೂಡಾಸಮಾ ತಮ್ಮ ಪ್ರಭಾವ ಬಳಸಿ ತನ್ನ ಪರವಾಗಿ ಫಲಿತಾಂಶ ಬರುವಂತೆ ನೋಡಿಕೊಂಡಿದ್ದಾರೆ. ಅಕ್ರಮ ಎಸಗಿ ಗೆದ್ದಿರುವ ಚುಡಾಸಮಾ ಅವರ ಗೆಲುವನ್ನು ರದ್ದುಗೊಳಿಸಬೇಕೆಂದು ಅಶ್ವಿನ್ ರಾಥೋಡ್ ಪರ ವಕೀಲರು ಕೋರ್ಟಿನಲ್ಲಿ ವಾದಿಸಿದ್ದರು.
ತೀರ್ಪಿಗೆ ಆಧಾರ ಏನು?
ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಬರುವ ಎಲ್ಲ ಚುನಾವಣೆಗಳ ಮತ ಎಣಿಕೆಯನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ. ಬಿಜೆಪಿ ಶಾಸಕರು ಚುನಾವಣೆತಯಲ್ಲಿ ಅಕ್ರಮ ನಡೆದಿಲ್ಲ ಎಂದು ವಾದಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ ಎಣಿಕೆಯ ಸಿಸಿಟಿವಿ ವಿಡಿಯೋವನ್ನು ನೀಡುವಂತೆ ಸೂಚಿಸಿತ್ತು. ಹಲವು ಬಾರಿ ಸೂಚಿಸಿದ ಬಳಿಕ ಸಿಸಿಟಿವಿ ವಿಡಿಯೋ ಸಲ್ಲಿಕೆಯಾಗಿತ್ತು. ಆದರೂ ಪೂರ್ಣ ಪ್ರಮಾಣದ ದೃಶ್ಯ ಇಲ್ಲದೇ ಕತ್ತರಿ ಹಾಕಿದ್ದ ದೃಶ್ಯಾವಳಿಗಳು ಇದರಲ್ಲಿತ್ತು. ಅಷ್ಟೇ ಅಲ್ಲದೇ ಸಲ್ಲಿಕೆಯಾಗಿದ್ದ ವಿಡಿಯೋದಲ್ಲಿ ಚೂಡಾಸಮಾ ಅವರ ಆಪ್ತ ಸಹಾಯಕ ಮತ ಎಣಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಅಕ್ರಮವಾಗಿ ಓಡಾಟ ನಡೆಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಎಲ್ಲ ಸಾಕ್ಷ್ಯಗಳನ್ನು ಪರಿಗಣಿಸಿದ ಕೋರ್ಟ್ ಚೂಡಾಸಮಾ ಅವರ ಗೆಲುವನ್ನು ಅಕ್ರಮ ಎಂದು ಹೇಳಿ ರದ್ದುಗೊಳಿಸಿದೆ.
ಮುಂದೇನು?
ಹೈಕೋರ್ಟ್ ಗೆಲುವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಚೂಡಾಸಮಾ ಅವರು ಶಾಸಕರಾಗಿ ಮುಂದುವರಿಯಲು ಸಾಧ್ಯವಿಲ್ಲ. ಆದರೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಡೆ ನೀಡುವಂತೆ ಕೇಳಬಹುದು. ಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿದರೆ ಚೂಡಾಸಮಾ ಮಂತ್ರಿಯಾಗಿ ಮುಂದುವರಿಯಬಹುದು.
  • Blogger Comments
  • Facebook Comments

0 comments:

Post a Comment

Item Reviewed: ಗುಜರಾತ್ ಕಾನೂನು ಸಚಿವರ ಗೆಲುವು ಅಕ್ರಮ ಎಂದು ಸಾರಿದ ಹೈಕೋರ್ಟ್ : ಬಿಜೆಪಿ ಸರಕಾರಕ್ಕೆ ಭಾರೀ ಮುಖಭಂಗ Rating: 5 Reviewed By: karavali Times
Scroll to Top