ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿನ ನೈಜ ಮೂಲ ಹುಡುಕಲು ವಿಶೇಷ ತನಿಖಾಧಿಕಾರಿಯನ್ನು ನೇಮಕಗೊಳಿಸುವಂತೆ ಕೆಪಿಸಿಸಿ ವಕ್ತಾರ ಪಿ.ವಿ. ಮೋಹನ್ ಆಗ್ರಹಿಸಿದ್ದಾರೆ.
ಕೊರೋನಾ ವೈರಾಣುವಿಗೆ ಮತ್ತೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಮತ್ತೊಂದು ಮಹಿಳೆಗೆ ಸೋಂಕು ದೃಡಪಟ್ಟಿದೆ. ಶಕ್ತಿನಗರ ನಂತರ ಇದೀಗ ಬೋಳೂರು ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಬಫರ್ ಝೋನ್ ಎಂದು ಘೋಷಿಸಲ್ಪಟ್ಟ 5 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಸುಮಾರು 80,000 ಬಡ ಜನರು ವಾಸಿಸುತ್ತಿದ್ದಾರೆ.
ಶಕ್ತಿನಗರದಲ್ಲಿ ಕೂಡಾ ಬಡ ಜನರೇ ಹೆಚ್ಚಾಗಿರುತ್ತಾರೆ. ಇದೀಗ ಜಿಲ್ಲೆಯು ನಿಜವಾಗಿಯೂ ಆತಂಕದಲ್ಲಿದೆ. ವಿಷೇಶವಾಗಿ ಮಂಗಳೂರು ಜನತೆ ಸ್ಥಿತಿಯೂ ಅಪಾಯದಲ್ಲಿದೆ. ಎಪ್ರಿಲ್ 19 ರ ನಂತರ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಮೇಲೆ ಪ್ರಾಥಮಿಕವಾಗಿ 19 ಸೋಂಕು ತಗಲಿದ ಪ್ರಕರಣಗಳು ಮತ್ತು ನಿನ್ನೆಯ 2 ಪ್ರಕರಣಗಳು ಕೂಡಾ ಪಡೀಲ್‍ನಲ್ಲಿರುವ ಒಂದೇ ಆಸ್ಪತ್ರೆಯ ಸಂಪರ್ಕದಿಂದ ಬಂದಿರುತ್ತದೆ. ಮೇಲ್ನೋಟಕ್ಕೆ ಈ ಸೋಂಕಿಗೆ ಮತ್ತು ಕೋವಿಡ್ ಬಲಿಗೆ ಮೂಲ ಕಸಬಾ ಗ್ರಾಮದ ಮಹಿಳೆಯ ಕುಟುಂಬವೇ ಕಾರಣವೆಂಬುದು ಕಂಡುಬರುತ್ತದೆ ಎಂದು ಹೇಳಿದ್ದಾರೆ.
ಮಂಗಳೂರಿನ ಪಡೀಲ್ ಆಸ್ಪತ್ರೆಯು ಜಿಲ್ಲೆಯ ಕೋವಿಡ್‍ನ ಮೂಲ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ. ಮೈಸೂರಿನ ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಯಿಂದ ಸುಮಾರು 70 ಪ್ರಕರಣಗಳು ದಾಖಲಾಗಿವೆ. ಮಂಗಳೂರು ದ.ಕ. ಜಿಲ್ಲೆಯ ಮತ್ತೊಂದು ನಂಜನಗೂಡಾಗಬಾರದು. ಸೋಂಕು ವ್ಯಾಪಕವಾಗುತ್ತಿದೆ ಮೂಲ ನಿಗೂಢವಾಗಿಯೇ ಇದೆ. ಉನ್ನತ ಅಧಿಕಾರಿಯಿಂದ ಸರಕಾರವು ತನಿಖೆ ಮಾಡಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಕೋವಿಡ್‍ನ ಪ್ರಸರಣ ಮತ್ತು ಸೋಂಕಿನ ನೈಜ ಮೂಲವನ್ನು ಹುಡುಕಲು ಸರ್ಕಾರ ಐ.ಪಿ.ಎಸ್ ಮೂಲದ ಅಧಿಕಾರಿಯನ್ನು ನೇಮಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕಾಂಗ್ರೆಸ್ ಪಕ್ಷವು ಪ್ರತಿಭಟನೆ ಮಾಡುವ ಸನ್ನಿವೇಶವನ್ನು ಸರಕಾರ ಈ ಸಮಯದಲ್ಲಿ ಸೃಷ್ಟಿಸಬಾರದು ಎಂದು ಪಿ.ವಿ. ಮೋಹನ್ ಎಚ್ಚರಿಸಿದ್ದಾರೆ.
0 comments:
Post a Comment