ಪಂಚಾಯತ್‍ಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ರಚಿಸುವ ಕೆಟ್ಟ ಸಂಪ್ರದಾಯಕ್ಕೆ ಸರಕಾರ ಮುಂದಾಗಬಾರದು : ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ - Karavali Times ಪಂಚಾಯತ್‍ಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ರಚಿಸುವ ಕೆಟ್ಟ ಸಂಪ್ರದಾಯಕ್ಕೆ ಸರಕಾರ ಮುಂದಾಗಬಾರದು : ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ - Karavali Times

728x90

16 May 2020

ಪಂಚಾಯತ್‍ಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ರಚಿಸುವ ಕೆಟ್ಟ ಸಂಪ್ರದಾಯಕ್ಕೆ ಸರಕಾರ ಮುಂದಾಗಬಾರದು : ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ



ಬೆಂಗಳೂರು (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತ್‍ಗಳಿಗೆ ಸರಕಾರ ಯಾವುದೇ ಕಾರಣಕ್ಕೂ ಹೊಸ ಆಡಳಿತ ಸಮಿತಿ ರಚಿಸುವ ಅಥವಾ ಆಡಳಿತಾಧಿಕಾರಿ ನೇಮಿಸುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಾರದು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, 5 ವರ್ಷಗಳ ಹಿಂದೆ ರಾಜ್ಯದ 6,024 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಗಳಲ್ಲಿ 97,060 ಸದಸ್ಯರು ಆಯ್ಕೆಯಾಗಿರುತ್ತಾರೆ. ಬರ, ಪ್ರವಾಹ ಕಠಿಣ ಪರಿಸ್ಥಿತಿಯನ್ನು ಹಾಗೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವುದರ ಮೂಲಕ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೋವಿಡ್-19 ಬಿಕ್ಕಟ್ಟನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ನಗರಗಳಿಂದ ವ್ಯಾಪಕವಾಗಿ ಜನರು ಹಳ್ಳಿಗಳಿಗೆ ವಲಸೆ ಹೋದರೂ ಈ ಬೇಸಿಗೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ ಮುಂತಾದ ಸಮಸ್ಯೆಗಳು ಸೃಷ್ಟಿಯಾಗದಂತೆ ಗ್ರಾಮ ಪಂಚಾಯಿತಿಗಳು ಅಚ್ಚು ಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ. ಈ ಸದಸ್ಯರುಗಳ ಪದಾವಧಿ ಮುಂದಿನ ಒಂದೆರಡು ತಿಂಗಳಲ್ಲಿ ಮುಗಿಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂವಿಧಾನದ ಅನುಚ್ಛೇದ 243 ರ ಪ್ರಕಾರ ಚುನಾವಣೆಗಳನ್ನು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ನಡೆಸಬೇಕಾಗಿದೆ. ಆದರೆ ಕೊರೋನ ಸೋಂಕಿನ ಹೆಸರು ಹೇಳಿಕೊಂಡು ಸರಕಾರ ಚುನಾವಣೆಗಳನ್ನು ಮುಂದೂಡಲು ಪ್ರಯತ್ನಿಸುತ್ತಿದೆ. ಹೀಗೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಹ ನಿಗದಿಪಡಿಸಿದ ಅವಧಿಯೊಳಗೆ ಚುನಾವಣೆಗಳನ್ನು ನಡೆಸುವಂತೆ ಸರಕಾರಗಳಿಗೆ ನಿರ್ದೇಶನಗಳನ್ನು ನೀಡಿವೆ ಎಂದು ಅವರು ಹೇಳಿದ್ದಾರೆ.

ಕೊರೋನ ಬಿಕ್ಕಟ್ಟಿನ ನೆಪದಲ್ಲಿ ಚುನಾವಣೆಗಳನ್ನು ನಡೆಸದೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಗಳನ್ನು ಮತ್ತು ನಾಮ ನಿರ್ದೇಶಿತ ಆಡಳಿತ ಸಮಿತಿಗಳನ್ನು ರಚಿಸಲು ಸರಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಸರಕಾರ ಒಂದು ವೇಳೆ ಹೀಗೆ ಮಾಡಿದ್ದೇ ಆದರೆ ಅದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗುತ್ತದೆ. ಗ್ರಾಮ ಪಂಚಾಯತಿಗಳ ಕಾರ್ಯ ವೈಖರಿಯ ಬಗ್ಗೆ ಏನೇನೂ ತಿಳಿವಳಿಕೆ ಇಲ್ಲದವರನ್ನು, ನಿರ್ದಿಷ್ಟ ಸಿದ್ಧಾಂತಗಳ ಹಿನ್ನೆಲೆಯವರನ್ನು ಸೇರಿಸಿ ಆಡಳಿತ ಸಮಿತಿ ರಚಿಸಿದರೆ ಕೊರೋನದಂತಹ ಭೀಕರ ಬಿಕ್ಕಟ್ಟನ್ನು ನಿಭಾಯಿಸಲು ಕಷ್ಟವಾಗುತ್ತದೆ. ಇದರಿಂದ ಗ್ರಾಮೀಣ ಕರ್ನಾಟಕ ತೀವ್ರ ಅನ್ಯಾಯಕ್ಕೆ ತುತ್ತಾಗುತ್ತದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಹೊಸ ಆಡಳಿತ ಸಮಿತಿ ರಚಿಸುವ ಅಥವಾ ಆಡಳಿತಾಧಿಕಾರಿ ನೇಮಿಸುವ ಕೆಟ್ಟ ಸಂಪ್ರದಾಯಕ್ಕೆ ಸರಕಾರ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಂದಿ ಹಾಡಬಾರದು. ಒಂದು ವೇಳೆ ತಾತ್ಕಾಲಿಕ ವ್ಯವಸ್ಥೆ ಮಾಡಲೇಬೇಕೆಂದಿದ್ದರೆ 1987 ರಲ್ಲಿ ಮಾಡಿದ್ದಂತೆ, ಪ್ರಸ್ತುತ ಅಧಿಕಾರದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಮತ್ತು ಸದಸ್ಯರನ್ನು ಮುಂದಿನ ಚುನಾವಣೆ ನಡೆಸುವವರೆಗೆ ಮುಂದುವರೆಸಬೇಕು. ಅದರ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಪಂಚಾಯತ್‍ಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ರಚಿಸುವ ಕೆಟ್ಟ ಸಂಪ್ರದಾಯಕ್ಕೆ ಸರಕಾರ ಮುಂದಾಗಬಾರದು : ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ Rating: 5 Reviewed By: karavali Times
Scroll to Top