ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಚಿಂತನೆ ಇಲ್ಲ : ಸಿಎಂ ಯಡಿಯೂರಪ್ಪ ಸ್ಪಷ್ಟನೆ - Karavali Times ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಚಿಂತನೆ ಇಲ್ಲ : ಸಿಎಂ ಯಡಿಯೂರಪ್ಪ ಸ್ಪಷ್ಟನೆ - Karavali Times

728x90

15 June 2020

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಚಿಂತನೆ ಇಲ್ಲ : ಸಿಎಂ ಯಡಿಯೂರಪ್ಪ ಸ್ಪಷ್ಟನೆ


ಗುರುವಾರ ಮಾಸ್ಕ್ ಡೇ ಆಚರಣೆ 


ಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಉದ್ದೇಶದಿಂದ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಜಾರಿಮಾಡುವ ಯಾವುದೇ ಚಿಂತನೆ ಇಲ್ಲ. ಆದರೆ ಸೋಂಕಿನ ಗಂಭೀರತೆ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಅಷ್ಟೇ ಅಲ್ಲದೇ ವಾರಾಂತ್ಯದ ಕರ್ಫ್ಯೂ ಸಹ ಜಾರಿಗೊಳಿಸುವುದಿಲ್ಲ, ಆದರೆ ಜನರಲ್ಲಿ ಮಾಸ್ಕ್ ಧರಿಸುವ ಕುರಿತು ಮತ್ತಷ್ಟು ಜನಜಾಗೃತಿ ಮೂಡಿಸಲಾಗುವುದು. ಇದೇ ಉದ್ದೇಶದಿಂದ ಗುರುವಾರ ಮಾಸ್ಕ್ ಡೇ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಚಿತ್ರ ನಟರು, ಗಣ್ಯರು, ಮಾಸ್ಕ್ ಧರಿಸುವ ಮತ್ತು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸಬೇಕು, ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುವುದು. ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಎಚ್ಚರಿಸಿದರು.

ಇದೇ ಗುರುವಾರ (ಜೂನ್ 18) ಮಾಸ್ಕ್ ಡೇ ಆಚರಿಸಲಾಗುವುದು. ವಿಧಾನಸೌಧದಿಂದ ಬೆಳಿಗ್ಗೆ 8.30ಕ್ಕೆ ಮಾಸ್ಕ್ ಧರಿಸಿ 1 ಕಿ.ಮೀ. ವಾಕ್ ಮಾಡುವ ಮೂಲಕ ಮಾಸ್ಕ್ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಕಾರ್ಯಕ್ರಮ ರಾಜ್ಯಾದ್ಯಂತ ಪಂಚಾಯತ್ ಮಟ್ಟದಲ್ಲಿಯೂ ಆಚರಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಮಹಾರಾಷ್ಟ್ರದಿಂದ ಆಗಮಿಸುವವರಿಗೆ 7 ದಿನ, ಚೆನ್ನೈ, ದೆಹಲಿಯಿಂದ ಬರುವವರಿಗೆ ಮೂರು ದಿನಗಳ ಕಾಲ ಕ್ವಾರಂಟೀನ್ ಮಾಡಲಾಗುವುದು. ಹೊರ ರಾಜ್ಯಗಳಿಂದ ಆಗಮಿಸುವವರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 697 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 330 ಸಕ್ರಿಯ ಪ್ರಕರಣಗಳಿದ್ದು, 6 ಜನ ಐಸಿಯುನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.

ರಾಜ್ಯದ 8000 ಬೂತ್ ಮಟ್ಟದಲ್ಲಿ ಟಾಸ್ಕ್‍ಫೆÇೀರ್ಸ್ ರಚಿಸಿ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು. ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ, ಹೋಂ ಕ್ವಾರಂಟೈನ್ ಪಾಲನೆಯನ್ನು ಖಾತರಿ ಪಡಿಸಲಾಗುವುದು ಎಂದ ಸಿಎಂ ರಾಜ್ಯದಲ್ಲಿ ಒಟ್ಟು 2956 ಸಕ್ರಿಯ ಪ್ರಕರಣಗಳು ಇದ್ದು, 93 ಶೇಕಡಾ ಜನರಿಗೆ ರೋಗ ಲಕ್ಷಣ ಇಲ್ಲ. 200 ಜನರಿಗೆ ಮಾತ್ರ ರೋಗ ಲಕ್ಷಣ ಇದೆ. ಹೀಗಾಗಿ ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 7,100 ಪರೀಕ್ಷೆ ನಡೆಸಲಾಗಿದೆ. ಐಸಿಎಂಆರ್ ಮಾರ್ಗಸೂಚಿಗಳಿಗಿಂತ ಹೆಚ್ಚು ಪರೀಕ್ಷೆ ನಡೆಸುತ್ತಿರುವುದು ರಾಜ್ಯದ ಹೆಗ್ಗಳಿಕೆಯಾಗಿದೆ ಎಂದರು.

ಚಿಕಿತ್ಸೆಯ ವಿಧಿ ವಿಧಾನ ಹಾಗೂ ಚಿಕಿತ್ಸೆ ದರ ನಿಗದಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಕುರಿತು ಶೀಘ್ರದಲ್ಲಿ ಮಾರ್ಗಸೂಚಿ ಹೊರಡಿಸಲಾಗುವುದು. ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆ ಆತಂಕ ಪಡಬೇಕಾಗಿಲ್ಲ. ಆದರೆ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಸ್ವಚ್ಛತೆಯಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದೆ ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಸಲಹೆ ನೀಡಿದರು.
  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಚಿಂತನೆ ಇಲ್ಲ : ಸಿಎಂ ಯಡಿಯೂರಪ್ಪ ಸ್ಪಷ್ಟನೆ Rating: 5 Reviewed By: karavali Times
Scroll to Top