ಮುಲ್ಕಿ ಸ್ವರ್ಣೋದ್ಯಮಿ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ದಸ್ತಗಿರಿ ಮಾಡಿದ ಮುಲ್ಕಿ ಪೊಲೀಸರು - Karavali Times ಮುಲ್ಕಿ ಸ್ವರ್ಣೋದ್ಯಮಿ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ದಸ್ತಗಿರಿ ಮಾಡಿದ ಮುಲ್ಕಿ ಪೊಲೀಸರು - Karavali Times

728x90

6 June 2020

ಮುಲ್ಕಿ ಸ್ವರ್ಣೋದ್ಯಮಿ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ದಸ್ತಗಿರಿ ಮಾಡಿದ ಮುಲ್ಕಿ ಪೊಲೀಸರು

ಮೃತ ಸ್ವರ್ಣೋದ್ಯಮಿ ಅಬ್ದುಲ್ ಲತೀಫ್ 


ಮಂಗಳೂರು (ಕರಾವಳಿ ಟೈಮ್ಸ್) : ಮೂಡಬಿದ್ರೆಯ ಸ್ವರ್ಣೋದ್ಯಮಿ ಅಬ್ದುಲ್ ಲತೀಫ್ (38) ಅವರನ್ನು ಮಂಗಳೂರು ಹೊರ ವಲಯದ ಮುಲ್ಕಿ ಎಂಬಲ್ಲಿ ದುಷ್ಕರ್ಮಿಗಳ ತಂಡವೊಂದು ಶುಕ್ರವಾರ ಸಂಜೆ ಇರಿದು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಲ್ಕಿ ಪೊಲೀಸರು ನಾಲ್ವರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ನಾಡ್ ಬಪ್ಪನಾಡು ನಿವಾಸಿಗಳಾದ ಮುಹಮ್ಮದ್ ಹಾಶಿಂ (27), ಮುಹಮ್ಮದ್ ರಾಝಿಂ (24) ಮತ್ತು ನಿಸಾರ್ ಯಾನೆ ರಿಯಾಝ್ (33), ಉಚ್ಚಿಲ ಬಡಾ ಗ್ರಾಮದ ಅಬೂಬಕ್ಕರ್ ಸಿದ್ದೀಕ್ (27) ಎಂಬ ನಾಲ್ಕು ಮಂದಿ ಆರೋಪಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಮೂಲ್ಕಿ ಜಂಕ್ಷನ್ ಸಮೀಪದ ಎಚ್‍ಡಿಎಫ್‍ಸಿ ಬ್ಯಾಂಕ್ ಮುಂಭಾಗ ಮೂಡಬಿದ್ರೆಯ ಅಲ್-ಐನ್ ಗೋಲ್ಡ್ ಎಂಬ ಬಂಗಾರದ ಅಂಗಡಿ ಮಾಲಕ ಅಬ್ದುಲ್ ಲತೀಫ್ ಅವರನ್ನು ದುಷ್ಕರ್ಮಿಗಳ ತಂಡ ಶುಕ್ರವಾರ ಸಂಜೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಹಳೆ ದ್ವೇಷದಿಂದ ಈ ಹತ್ಯೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಕಂಡುಕೊಂಡಿದ್ದ ಮೂಲ್ಕಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತನಿಖೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದ ಪೊಲೀಸರು ನಾಲ್ಕು ಮಂದಿಯನ್ನು ದಸ್ತಗಿರಿ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕಾರ್ನಾಡ್ ದರ್ಗಾ ರೋಡ್ ನಿವಾಸಿ, ಕಾಂಗ್ರೆಸ್ ಮುಖಂಡ, ಲತೀಫ್ ಅವರ ಮಾವ ಮುನೀರ್ ಹಾಗೂ ಅವರ ಪುತ್ರ ಇಯಾಝ್ ಅವರ ಜೊತೆ ಅಬ್ದುಲ್ ಲತೀಫ್ ಅವರು ಶುಕ್ರವಾರ ಸಂಜೆ ಎಚ್‍ಡಿಎಫ್‍ಸಿ ಬ್ಯಾಂಕ್‍ಗೆ ಬಂದಾಗ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದರು. ಮುನೀರ್ ಮೇಲೆ ಹಲ್ಲೆ ನಡೆಯುವುದನ್ನು ಕಂಡ ಲತೀಫ್ ಅಡ್ಡ ಬಂದಿದ್ದು, ಈ ವೇಳೆ ದುಷ್ಕರ್ಮಿಗಳು ಲತೀಫ್ ಮೇಲೆ ಹಿಗ್ಗಾಮುಗ್ಗಾ ತಲವಾರು ಝಳಪಿಸಿ ಬಳಿಕ ಇಯಾಝ್ ಮೇಲೂ ದಾಳಿ ನಡೆಸಿ ಪರಾರಿಯಾಗಿದ್ದರು.

ತಲವಾರು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಲತೀಫ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಮುನೀರ್ ಅವರ ಮೇಲೆ ಪೂರ್ವದ್ವೇಷದಿಂದ ತಂಡ ಈ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಲ್ಲೆಯಿಂದ ಗಾಯಗೊಂಡ ಮುನೀರ್, ಇಯಾಝ್ ಹಾಗೂ ಇಮ್ರಾನ್ ಅವರನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
  • Blogger Comments
  • Facebook Comments

0 comments:

Post a Comment

Item Reviewed: ಮುಲ್ಕಿ ಸ್ವರ್ಣೋದ್ಯಮಿ ಹತ್ಯೆ ಪ್ರಕರಣ : ನಾಲ್ವರು ಆರೋಪಿಗಳ ದಸ್ತಗಿರಿ ಮಾಡಿದ ಮುಲ್ಕಿ ಪೊಲೀಸರು Rating: 5 Reviewed By: karavali Times
Scroll to Top