ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಲಾಕ್ ಡೌನ್ ಕಾರಣದಿಂದ ಮಾರ್ಚ್ ತಿಂಗಳಲ್ಲಿ ರದ್ದಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ನಡೆಯುತ್ತಿದ್ದು, ಹಲವಾರು ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಪಿಯು ಬೋರ್ಡ್ ಎಲ್ಲಾ ಸಿದ್ದತೆ ಮಾಡಿಕೊಂಡಿದೆ.
ಬೆಳಗ್ಗೆ 10.15ಕ್ಕೆ ಪರೀಕ್ಷೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಸ್ಯಾನಿಟೈಸರ್, ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಬಸ್ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ.
2,87,663 ವಿದ್ಯಾರ್ಥಿಗಳು, 3,08,334 ವಿದ್ಯಾರ್ಥಿನಿಯರು ಸೇರಿ ರಾಜ್ಯದಲ್ಲಿ ಒಟ್ಟು 5,95,997 ಮಂದಿ ಪರೀಕ್ಷೆ ಬರೆಯುತ್ತಿದ್ದು, ಒಟ್ಟು 1016 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ರಾಜ್ಯಾದ್ಯಂತ 430 ಜಿಲ್ಲಾ ಕೇಂದ್ರ, 328 ತಾಲೂಕು ಕೇಂದ್ರ, 258 ಹೋಬಳಿ ಮಟ್ಟದ ಕೇಂದ್ರಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಹೆಚ್ಚುವರಿ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಬೇರೆ ಜಿಲ್ಲೆಗೆ ತೆರಳಿರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅವರ ಜಿಲ್ಲೆಯಲ್ಲೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. 18,524 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿದ್ದಾರೆ. 1,889 ವಿದ್ಯಾರ್ಥಿಗಳಿಗೆ ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಪರೀಕ್ಷೆ ಬರೆಯಲು ಗಡಿ ಭಾಗದ ಜಿಲ್ಲಾ ಕೇಂದ್ರಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಎಲ್ಲ ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಪ್ರತಿ ಕೇಂದ್ರದಲ್ಲಿ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು, ಅನಾರೋಗ್ಯ ಲಕ್ಷಣಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗುವುದು, ಪರೀಕ್ಷಾ ಕೊಠಡಿಯಲ್ಲಿ ಕಡಿಮೆ ವಿದ್ಯಾರ್ಥಿಗಳನ್ನು ಕೂಡಿಸಿ ಪರೀಕ್ಷೆ ನಡೆಸಲಾಗುವುದು, ಕೊರೊನಾ ಹಿನ್ನಲೆಯಲ್ಲಿ ವಿದ್ಯಾರ್ಥಿ ಪರೀಕ್ಷೆಗೆ ಗೈರಾದರೆ ಪೂರಕ ಪರೀಕ್ಷೆಯಲ್ಲಿ ಅವಕಾಶ. ರೆಗ್ಯುಲರ್ ವಿದ್ಯಾರ್ಥಿ ಎಂದು ಪರಿಗಣಿಸಲಾಗುವುದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ, ಆರೋಗ್ಯದ ಬಗ್ಗೆ ನಿಗಾವಹಿಸಲು ಹೆಚ್ಚುವರಿ ಉಪನ್ಯಾಸಕರ ನೇಮಕ ಮಾಡಲಾಗುವುದು, ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು, ಹೊಸ ಕೇಂದ್ರ ಬದಲಾವಣೆ ಆಗಿ ತಾಂತ್ರಿಕ ಕಾರಣದಿಂದ ಆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆಗದೇ ಇದ್ದರೆ ಹಿಂದಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗುವುದು, ಪ್ರವೇಶ ಪತ್ರ ತೋರಿಸಿ ವಿದ್ಯಾರ್ಥಿಗಳು ಬಸ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ಸಂಚರಿಸಬಹುದು.
0 comments:
Post a Comment