ಹಲ್ಲೆ ಕೃತ್ಯದ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರಿಂದ ಕ್ರಮ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕದಲ್ಲಿ ಮೊಬೈಲ್ ಕದ್ದ ಆರೋಪ ಹೊರಿಸಿ ಬಾಳ್ತಿಲ ಗ್ರಾಮದ ನಿವಾಸಿ ಉದಯ ಎಂಬ ಯುವಕನ ಮೇಲೆ ತಂಡವೊಂದು ಶುಕ್ರವಾರ ನೈತಿಕ ಪೊಲೀಸ್‍ಗಿರಿ ಮೆರೆದುದಲ್ಲದೆ ಘಟನೆಯನ್ನು ವೀಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ವೀಡಿಯೋ ವೈರಲ್ ಆದ ತಕ್ಷಣ ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಿಗ್ಗೆ 11 ರ ವೇಳೆಗೆ ಉದಯ ಕಲ್ಲಡ್ಕ ಸಮೀಪದ ಪಳನೀರ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಗೋಳ್ತಮಜಲು ನಿವಾಸಿ ಸಚ್ಚು, ರಿಕ್ಷಾ ಚಾಲಕರಾದ ಪಚ್ಚು ಹಾಗೂ ಶ್ರೀನಿವಾಸ, ಪಿಕಪ್ ಚಾಲಕ ಚಂದ್ರ, ಮುರಬೈಲು ನಿವಾಸಿ ಹರೀಶ ಅಲಿಯಾಸ್ ಕೋಗಿಲೆ ಎಂಬವರನ್ನೊಳಗೊಂಡ ತಂಡ ಹೋಂಡಾ ಆಕ್ಟೀವಾ ಹಾಗೂ ಅಟೋ ರಿಕ್ಷಾದಲ್ಲಿ ಬಂದು ಆತನನ್ನು ತಡೆದು ಅನತಿ ದೂರದ ಗುಡ್ಡ-ಕಾಡಿಗೆ ಕರೆದುಕೊಂಡು ಹೋಗಿ, ಅವ್ಯಾಚ ಶಬ್ದಗಳಿಂದ ಬೈದು, ಮನೆಯೊಂದರ ಮೊಬೈಲ್ ಎಗರಿಸಿದ ಆರೋಪ ಹೊರಿಸಿ ಆತನನ್ನು ನೆಲಕ್ಕೆ ಬೀಳಿಸಿ ಕೈಯಿಂದ ಹಾಗೂ ಮರದ ಕೋಲಿನಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ನೈತಿಕ ಪೊಲೀಸ್‍ಗಿರಿ ಮೆರೆದಿದ್ದಾರೆ. ಅಲ್ಲದೆ ಥಳಿಸುವ ಕೃತ್ಯವನ್ನು ವೀಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲಾಗಿದೆ. ನೈತಿಕ ಪೊಲೀಸ್‍ಗಿರಿ ಮೆರೆಯುವ ವೀಡಿಯೋ ಜಾಲ ತಾಣಗಳಲ್ಲಿ ವೈರಲ್ ಆದ ತಕ್ಷಣ ಸುದ್ದಿ ತಿಳಿದ ಜಿಲ್ಲಾ ಎಸ್ಪಿ ಅವರ ಸೂಚನೆ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡ ಉದಯ ಬೊಬ್ಬೆ ಹೊಡೆದಾಗ ಆರೋಪಿಗಳು ಮರದ ಕೋಲನ್ನು ಅಲ್ಲಿಯೇ ಬಿಸಾಡಿ, ಜೀವ ಬೆದರಿಕೆ ಹಾಕಿ ಆತನನ್ನು ಅಲ್ಲೇ ಬಿಟ್ಟು, ಬಂದ ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಉದಯ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಲಂ 143, 147, 148, 341, 504, 323, 324, 506 ಜೊತೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
0 comments:
Post a Comment