ಅಕ್ರಮ ಜೂಜಾಟದ ಬಗ್ಗೆ ವೈರಲ್ ವೀಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಯುವಕನ ಭಂಗಿ ಹಾಗೂ ವೈರಲ್ ವೀಡಿಯೋದಲ್ಲಿ ತೋರಿಸಲಾಗುತ್ತಿರುವ ಅಕ್ರಮ ಜೂಜು ಅಡ್ಡೆಯ ದೃಶ್ಯ
ಜಿಲ್ಲೆಯ ಎಂಪಿ, ಎಲ್ಲೆಎ, ರಾಜಕಾರಣಿಗಳಿಗೆ ತೀವ್ರ ತರಾಟೆ : ಜಿಲ್ಲೆಯ ಪೊಲೀಸರಿಗೆ ಸವಾಲಾದ ಯುವಕನ ಪ್ರಶ್ನೆಗಳು
ಮಂಗಳೂರು (ಕರಾವಳಿ ಟೈಮ್ಸ್) : ಕೋವಿಡ್ ಹೆಸರಿನಲ್ಲಿ ಜಿಲ್ಲೆಯಾದ್ಯಂತ ಸರಕಾರ ಪೂಜಾ ಸ್ಥಳಗಳಿಗೆ ನಿರ್ಬಂಧ ಹೇರಿ, ಆ ಮೂಲಕ ಪ್ರಸಾದ ಸ್ವೀಕಾರಕ್ಕೂ ಕಡಿವಾಣ ಹಾಕಿದೆ. ಹೀಗಿದ್ದರೂ ರಾಜಕೀಯ ಕೃಪಾಕಟಾಕ್ಷದಿಂದ ಕಾನೂನು ಬಾಹಿರ ಜೂಜಾಟ ಕೇಂದ್ರಗಳು ಯಾವುದೇ ಕೋವಿಡ್ ಮಾರ್ಗಸೂಚಿ ಪಾಲನೆ ಇಲ್ಲದೆ ಅಕ್ರಮವಾಗಿ ನಿರಂತರವಾಗಿ ಕಾರ್ಯಾಚರಿಸುತ್ತಿದೆ ಎಂದು ಯುವಕನೋರ್ವ ಸರಕಾರ, ಶಾಸಕರು, ಸಂಸದರು ಹಾಗೂ ರಾಜಕಾರಣಿಗಳ ವಿರುದ್ದ ಹಿಗ್ಗಾಮುಗ್ಗಾ ಝಾಡಿಸಿ ಆಕ್ರೋಶ ವ್ಯಕ್ತಪಡಿಸಿದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಶುಕ್ರವಾರ ಸಕತ್ ವೈರಲ್ ಆಗಿದೆ.
ವೀಡಿಯೋದಲ್ಲಿ ಮಾತನಾಡುವ ಯುವಕ ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಿಗೆ ಈ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಅಕ್ರಮ ಜೂಜಾಟ ಕೇಂದ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದಾದರೆ ಅದಿನ್ನೇಗೆ ಇಡೀ ರಾಜ್ಯದಲ್ಲಿ ಪಕ್ಷವನ್ನು, ಕಾರ್ಯಕರ್ತರನ್ನು ನಿಯಂತ್ರಿಸುತ್ತಾರೆ ಎಂದು ಪ್ರಶ್ನಿಸುವ ಮೂಲಕ ನೇರ ಸವಾಲನ್ನು ಒಡ್ಡುತ್ತಿರುವ ದೃಶ್ಯ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಂಪ್‍ವೆಲ್, ಹೊಯಿಗೆ ಬಜಾರ್, ಬೈಕಂಪಾಡಿ, ಮೆಲ್ಕಾರ್ ಮೊದಲಾದ ಸ್ಥಳಗಳಲ್ಲಿ ಇಂತಹ ಅಕ್ರಮ ಜೂಜಾಟ ಕೇಂದ್ರಗಳು ರಾಜಾರೋಷವಾಗಿ ನಡೆಯುತ್ತಿದೆ. ಈ ಎಲ್ಲಾ ಕೇಂದ್ರಗಳೂ ರಾಜಕೀಯ ಪ್ರಮುಖರ ಮುಂದಾಳುತ್ವದಲ್ಲಿ ಚುನಾಯಿತ ಪ್ರತಿನಿಧಿಗಳ ಕೃಪಾಕಟಾಕ್ಷದಿಂದ ನಡೆಯುತ್ತಿದೆ. ರಾಜಕಾರಣಿಗಳಿಗೆ ಇದರಿಂದ ಮಾಮೂಲು ಬರುತ್ತಿದೆ ಎಂದು ವೀಡಿಯೋದಲ್ಲಿ ಹೇಳುವ ಯುವಕ ಜೂಜಾಟ ನಡೆಯುವ ಕೇಂದ್ರಗಳನ್ನು ಗಮನಿಸಿ, ಯಾವ ಸ್ಥಳ ಇದು ಎಂಬುದಾಗಿ ಹುಡುಕಿ ಎಂದು ಜೂಜಾಟ ಕೇಂದ್ರವೊಂದರ ವೀಡಿಯೋ ಕೂಡಾ ವೈರಲ್ ವೀಡಿಯೋದಲ್ಲಿ ಅಳವಡಿಸಲಾಗಿದೆ. ಒಟ್ಟಿನಲ್ಲಿ ಯುವಕನ ಈ ವೀಡಿಯೋ ಜಿಲ್ಲೆಯ ಪೊಲೀಸ್ ಇಲಾಖೆಗೂ ಸವಾಲಿನಂತಿದ್ದು, ವ್ಯಾಪಕವಾಗಿ ವೈರಲ್ ಆಗುತ್ತಿದೆ.
0 comments:
Post a Comment