ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕ ಸಂಘ (ಎಐಟಿಯುಸಿ) ಬಂಟ್ವಾಳ ತಾಲೂಕು ಘಟಕ ಹಾಗೂ ಕಾರ್ಮಿಕ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ ಕಟ್ಟಡ ಕಾರ್ಮಿಕರಿಗೆ ಕೊರೋನಾ ವೈರಸ್ ತಡೆಗಟ್ಟುವ ಬಗ್ಗೆ ಮಾಹಿತಿ ಅಭಿಯಾನದ ಅಂಗವಾಗಿ ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮವು ಬಂಟ್ವಾಳ ಬೈಪಾಸ್ ರಸ್ತೆಯ ಕಾಮ್ರೆಡ್ ಶಾಂತರಾಮ್ ಪೈ ಸ್ಮಾರಕ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ದ.ಕ. ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ್ ಮಾರಿಪಳ್ಳ ಅವರು ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಸವಲತ್ತುಗಳನ್ನು ಪಡೆಯಲು ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿಕೊಂಡಿರುವ ಕೆಲಸಗಾರರು ಮಂಡಳಿಯ ಸದಸ್ಯರಾಗಿ ಸೌಲಭ್ಯವನ್ನು ಪಡೆಯಲು ಹೆಚ್ಚು ಸಂಘಟಿತರಾಗಿ ಮುಂದುವರಿಯಲು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾರ್ಮಿಕ ಇಲಾಖೆ ಮಂಗಳೂರು 1ನೇ ವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೊ ಎಲಿಜಬೆತ್ ಅವರು ಕೊರೋನಾ ವೈರಸ್ ಹರಡುವ ಬಗ್ಗೆ ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಗಳಲ್ಲಿ ಮತ್ತು ಪರಿಸರದಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತು ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ವೃತ್ತ ಕಾರ್ಮಿಕ ನಿರೀಕ್ಷಕ ಮೆರ್ಲಿನ್ ಗ್ರೆಸೀಯಾ ಡಿ’ಸೋಜಾ ಮಾತನಾಡಿ ಕಟ್ಟಡ ಕಾರ್ಮಿಕರ ಹೊಸ ನೋಂದಣಿ, ರಿನಿವಲ್ ಮತ್ತು ಸರಕಾರ ಘೋಷಿಸಿರುವ ಪರಿಹಾರ ಧನ ಮತ್ತು ಕ್ಲೈಮ್ ಅರ್ಜಿಗಳ ವಿಲೇವಾರಿ ಮುಂತಾದ ಕಛೇರಿ ಕೆಲಸಗಳ ಒತ್ತಡದಿಂದಾಗಿ ಮಂಜೂರಾತಿ ಕೆಲಸ ವಿಳಂಬವಾಗಿರುವುದಕ್ಕೆ ಕಾರ್ಮಿಕರು ಸಹಕರಿಸಬೇಕಾಗಿ ಮನವಿ ಮಾಡಿದರು.
ಎಐಟಿಯುಸಿ ಪ್ರಮುಖ ಸುರೇಶ್ ಕುಮಾರ್, ಸಂಘದ ಸಹ ಕಾರ್ಯದರ್ಶಿ ಹರ್ಷಿತ್ ಪೂಜಾರಿ, ಉಪಾಧ್ಯಕ್ಷ ಬಾಲಕೃಷ್ಣ ಮದ್ವ ಉಪಸ್ಥಿತರಿದ್ದರು. ಸಂಘದ ಕಛೇರಿ ಕಾರ್ಯದರ್ಶಿ ಕುಮಾರಿ ಕೇಶವತಿ ಸ್ವಾಗತಿಸಿ, ಸಂಘದ ಕಾರ್ಯದರ್ಶಿಗಳಾದ ಬಿ ಶೇಖರ್ ಪ್ರಸ್ತಾವನೆಗೈದರು. ಸುರೇಶ್ ಕುಮಾರ್ ವಂದಿಸಿದರು.
0 comments:
Post a Comment